ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ ಗುರುತಿಸಿ-ಸಿಇಒ ಸೋಮಶೇಖರ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಪುರಸ್ಕಾರ ನೀಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ಚಳ್ಳಕೆರೆ ತಾಲ್ಲೂಕು ಪಂಚಾಯಿತಿ  ಕಾರ್ಯಾಲಯದಲ್ಲಿ ಬುಧವಾರ ಬಾಲ್ಯವಿವಾಹಗಳ ಬಗ್ಗೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

- Advertisement - 

  ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಬಾಲ್ಯವಿವಾಹದ ನಿಷೇಧದ ಬಗ್ಗೆ ಹಾಗೂ ಬಾಲ ಗರ್ಭಿಣಿ ಮತ್ತು ಬಾಲ ತಾಯಂದಿರು ಕುರಿತು ನಿಗಾವಹಿಸುವ ಸಂಬಂಧ ಭೌತಿಕವಾಗಿ (ಮುಖಾ ಮುಖಿ) ತರಬೇತಿ ಆಯೋಜಿಸುವುದು. ಬಾಲಕಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಬಾಲ್ಯವಿವಾಹಗಳು ಎಲ್ಲೂ ನಡೆಯದಂತೆ ನೋಡಿಕೊಳ್ಳಬೇಕು.

- Advertisement - 

ಎಲ್ಲಾ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯ. ಶಾಲೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಅರಿವು, ಜಾಗೃತಿ, ಬೀದಿ ನಾಟಕಗಳ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾನೂನು ವಿದ್ಯಾರ್ಥಿಗಳು, ಎನ್‍ಜಿಒ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರನ್ನು ಬಳಸಿಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ಮಕ್ಕಳ ಸಹಾಯವಾಣಿ 1098 ಕುರಿತು ಎಲ್ಲಾ ಶಾಲಾ, ಕಾಲೇಜುಗಳಲ್ಲಿ, ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣುವಂತೆ ಬರೆಯಿಸಿ ಪ್ರಚುರ ಪಡಿಸಿ ವ್ಯಾಪಕ ಪ್ರಚಾರ ನೀಡಬೇಕು. ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯತ್‍ಗಳನ್ನು (ಬಾಲ್ಯವಿವಾಹಕ್ಕೆ ಶೂನ್ಯ ಸಹಿಷ್ಣುತೆ ಹೊಂದಿದ ಗ್ರಾಮ ಪಂಚಾಯತ್) ಗುರುತಿಸಿ ಪುರಸ್ಕಾರ ನೀಡುವುದು. ಅದೇ ರಿತಿಯಾಗಿ ಬಾಲ್ಯವಿವಾಹ ಸಂಬಂಧಿತ ಮಾಹಿತಿಯನ್ನು ಸುರಕ್ಷಿಣಿತಂತ್ರಾಂಶಗಳಲ್ಲಿ ಅಪ್‍ಲೋಡ್ ಮಾಡುವುದು ಕಡ್ಡಾಯ ಎಂದರು.

- Advertisement - 

ಗ್ರಾಮಗಳಲ್ಲಿ ಬಾಲ್ಯವಿವಾಹಗಳು ನಡೆಯದಂತೆ ನಿಗಾವಹಿಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲ್ಯವಿವಾಹ ನಿಷೇಧಾಧಿಕಾರಿಗಳಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮಾಡಳಿತ ಅಧಿಕಾರಿ, ಮುಖ್ಯ ಶಿಕ್ಷಕರು ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರನ್ನೊಳಗೊಂಡ ವಿಶೇಷ ನಿಗಾ ರಚಿಸಿಕೊಂಡು ಕೆಲಸ ಮಾಡುವುದು.

ಬಾಲ್ಯವಿವಾಹ ಸಂತ್ರಸ್ತರಿಗೆ ಮತ್ತು ಸಂಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಇಲಾಖೆಯ ಪ್ರಾಯೋಜಕತ್ವ ಮತ್ತು ಇತರೆ ಸೇವೆಗಳನ್ನು ಒದಗಿಸುವುದು ಮತ್ತು ಬಾಲ ಮಂದಿರಗಳಲ್ಲಿ ಪುನರ್ವಸತಿ ನೀಡಿ, ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸುವುದು. ಎಲ್ಲಾ ಸರ್ಕಾರಿ ಕಛೇರಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಚುರ ಪಡಿಸಿ, ವ್ಯಾಪಕ ಪ್ರಚಾರ ಮಾಡುವುದು. ಪ್ಪಿದ್ದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.

ಶಾಲೆ ಬಿಟ್ಟು ಮಕ್ಕಳ ಬಗ್ಗೆ ತುರ್ತಾಗಿ ವರದಿ ಮಾಡುವುದು. ಒಂದು ದಿನ ಅಥವಾ ಎರಡು ದಿನಗಳ ಗೈರಾಗಿದ್ದರೂ ವರದಿ ನಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪುನಃ ಶಾಲೆಗೆ ಕರೆತರಲು ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರಲು ಗುಣ ಮಟ್ಟದ ಶಿಕ್ಷಣ ನೀಡಬೇಕು. ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕೂತು ಕೆಲಸ ಮಾಡದೇ ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಜನರೊಂದಿಗೆ ಬೆರೆತಾಗ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲು ಸಾಧ್ಯ ಎಂದರು.

 

Share This Article
error: Content is protected !!
";