ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ರವರು ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ರೋಷಿನಿ ಗೌಡ ಖಂಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿರುವ ರವಿಕುಮಾರ್ ಎನ್ ರವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿ ಅವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯ ಸಚಿವ ಸಂಪುಟದ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೂ ಮುಖ್ಯಸ್ಥರಾಗಿರುತ್ತಾರೆ. ಶಾಲಿನಿ ರಜನೀಶ್ ರವರು ಒಬ್ಬ ಘನತವೆತ್ತ ಮಹಿಳೆಯಾಗಿ ಎಲ್ಲ ಮಹಿಳೆಯರಿಗೆ ಆದರ್ಶ ಪ್ರಾಯವಾಗಿರುತ್ತಾರೆ ಎಂದು ರೋಷಿನಿ ಗೌಡ ಹೇಳಿದ್ದಾರೆ.
ಇಂತಹ ಅಧಿಕಾರಿ ವಿರುದ್ಧ ರವಿಕುಮಾರ್ ನಿಂದಿಸಿರುವುದು ಅಕ್ಷಮ್ಯ ಅಪರಾಧ. ಪ್ರಜ್ಞಾವಂತ ಜನಪ್ರತಿನಿಧಿಗೆ ಶೋಭಿಸುವಂತಹ ಕೆಲಸವಲ್ಲ. ಸರ್ಕಾರದ ಪರವಾಗಿ ಮತ್ತು ರಾಜ್ಯದ ಸಾರ್ವಜನಿಕ ಹಿತದೃಷ್ಠಿಯಿಂದ ಶ್ರಮಿಸುತ್ತಿರುವ ಒಬ್ಬ ಮಹಿಳಾ ಅಧಿಕಾರಿಯ ಹೆಸರಿಗೆ ಕಳಂಕ ತರುವ ಮತ್ತು ಮಹಿಳೆಯರ ಆತ್ಮಸ್ಥೈರ್ಯ ಕುಗ್ಗಿಸುವ ಹೇಳಿಕೆಗಳು ಖಂಡನೀಯ ಎಂದಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾಡಿರುವ ಅವಮಾನ ಸಮಸ್ತ ಸರಕಾರಿ ನೌಕರರಿಗೆ ಹಾಗೂ ಸಮಸ್ತ ಮಹಿಳಾ ಸಮಾಜಕ್ಕೆ ಆಗಿರುವ ಅವಮಾನ ಎಂದು ಸಚಿವಾಲಯ ನೌಕರರ ಸಂಘವು ಭಾವಿಸಿ, ಎನ್ ರವಿಕುಮಾರ್ ಅವರ ಕೃತ್ಯ ಖಂಡಿಸುತ್ತದೆ. ರವಿಕುಮಾರ್ ರವರು ಕೂಡಲೇ ಮುಖ್ಯ ಕಾರ್ಯದರ್ಶಿಯವರಲ್ಲಿ ಕ್ಷಮೆ ಯಾಚಿಸುವಂತೆ ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘವು ಆಗ್ರಹಿಸಿದೆ.
ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಯಾವುದೇ ಜನ ಪ್ರತಿನಿಧಿಗಳು ಅಸಂವಿಧಾನಿಕ ಪದಗಳಿಂದ/ ಅವಹೇಳನಕಾರಿಯಾಗಿ ಮಾತನಾಡದಂತೆ ಸರ್ಕಾರದಲ್ಲಿ ನಿಯಮಗಳನ್ನು ರೂಪಿಸಬೇಕಾಗಿದೆ ಮತ್ತು ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸರ್ಕಾರಕ್ಕೆ ಬೇಡಿಕೆಯನ್ನು ಮಂಡಿಸುತ್ತಾ ಈ ಕೃತ್ಯವನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘ ಉಗ್ರವಾಗಿ ಖಂಡಿಸುತ್ತದೆ ಮತ್ತು ಪ್ರತಿರೋಧ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

