ಹಿಂಗಾರಿಗೆ ರಸಗೊಬ್ಬರದ ಕೊರತೆ ಇಲ್ಲ: ಚಲುವರಾಯಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ದಾಸ್ತಾನಿದ್ದು
, ರೈತರಿಗೆ ಅನಾನುಕೂಲವಾಗದಂತೆ ರಸಗೊಬ್ಬರ ವಿತರಣೆ ಮಾಡುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಯವರು ತಿಳಿಸಿದರು.

ವಿಕಾಸಸೌಧದ ಸಮಿತಿ ಕೊಠಡಿಯಲ್ಲಿ ಇಂದು ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ ಹಾಗು 5 ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು,

- Advertisement - 

ಸರ್ಕಾರದ ಆಶಯವನ್ನು ಅರಿತು ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು  ಕರೆ ನೀಡಿದರು.

ಕರ್ನಾಟಕದಲ್ಲಿ ಕೃಷಿ ಬಹುಜನರ ಪ್ರಧಾನ ಕಾಯಕ, ಈ ಕ್ಷೇತ್ರದಲ್ಲಿ ತೊಡಗಿದ ರೈತರು ಹಾಗೂ ಕೃಷಿ ಕಾರ್ಮಿಕರ ಹಿತ ಕಾಯುವುದು ಸರ್ಕಾರ ಹಾಗೂ ಇಲಾಖೆಯ ಜವಾಬ್ದಾರಿ ಅವರನ್ನು ಅಲೆದಾಡಿಸದೆ ಮನೆ ಬಾಗಿಲಿಗೆ ಯೋಜನೆಗಳ ಫಲ ತಲುಪಿಸಿ ಎಂದು ಸಚಿವರು ನಿರ್ದೇಶನ ನೀಡಿದರು.

- Advertisement - 

 ರಾಜ್ಯದಲ್ಲಿ ಕೃಷಿ ಬಹುತೇಕ ಮಳೆಯಾಶ್ರಿತವಾಗಿದೆ.  ಹಾಗಾಗಿ ಬೆಳೆ ವಿಮೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಎಲ್ಲಾ ರೈತರು ಈ ಯೋಜನೆ ವ್ಯಾಪ್ತಿಗೆ ಒಳಪಡುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಇಲಾಖೆಯಲ್ಲಿ ಕಳೆದ 2 ವರ್ಷಗಳಲ್ಲಿ ತೋರಿದ ಸಾಧನೆ ಜನಪರ ಕಾಳಜಿಯ ಸೇವೆಯನ್ನು ಅಭಿನಂದಾನಾರ್ಹವಾಗಿದೆ ಆದರೆ ಎಲ್ಲಾ ಜಿಲ್ಲೆಗಳಲ್ಲಿಯೂ ಒಂದೆ ರೀತಿಯ ಪ್ರಗತಿಯನ್ನು ನಿರೀಕ್ಷಿಸಲಾಗುತ್ತಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಎಚ್ಚರಿಸಿದರು.

ಕೃಷಿ ವಿಶ್ವವಿದ್ಯಾನಿಲಯಗಳು ನಡೆಸುವ ಸಂಶೋಧನಾ ಫಲ ರೈತರಿಗೆ ಸಲುಭವಾಗಿ ತಲುಪುವಂತಾಗಬೇಕು.  ಬೇಸಾಯದಲ್ಲಿ ತಂತ್ರಜ್ಞಾನ, ವೈಜ್ಞಾನಿಕತೆ ಪರಿಣಾಮಕಾರಿಯಾಗಿ ಅಳವಡಿಕೆಯಾಗಬೇಕು. ಕೃಷಿಕರಿಗೆ ನಿಖರವಾದ ಮಾರ್ಗದರ್ಶನ ನೀಡಬೇಕು, ಆ ಮೂಲಕ ಕೃಷಿಕರ ಆರ್ಥಿಕ ಸುಧಾರಣೆಗೆ ನೆರವಾಗಬೇಕು ಎಂದು ಅವರು ಸಲಹೆ ನೀಡಿದರು.

 ಕರ್ನಾಟಕವನ್ನು ತೊಗರಿ ಬೆಳೆಯಲ್ಲಿ ಮುಂಚೂಣಿ ರಾಜ್ಯವನ್ನಾಗಿಸುವ ಗುರಿಹೊಂದಲಾಗಿದೆ ಎಲ್ಲಾ ಕ್ಷೇತ್ರಗಳಿಗೂ ಕೃಷಿ ಭಾಗ್ಯ ಯೋಜನೆ ವಿಸ್ತರಿಸಲಾಗಿದೆ.

ಸಾವಯವ ಮತ್ತು ಸಮಗ್ರ ಬೇಸಾಯ ಪದ್ದತಿ ಪ್ರೋತ್ಸಾಹಕ್ಕೂ ಯೋಜನೆ ಜಾರಿಗೊಳಿಸಲಾಗಿದೆ.ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಗಮನ ಹರಿಸಬೇಕು ಎಂದರು.

ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಒದಗಿಸುತ್ತಿದೆ, ಎಲ್ಲಾ ವರ್ಗದ ರೈತರಿಗೆ ಸೂಕ್ಷ್ಮ ನೀರಾವರಿ ಸಾಧನಗಳನ್ನು ಕೊಳ್ಳಲು ಇದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆ, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿನಲ್ಲಿ ಯಾವುದೇ ಕೊರತೆ ಇಲ್ಲ ಪೂರೈಕೆ, ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿ ಸಿಬ್ಬಂದಿ ನಿಗಾ ವಹಿಸಬೇಕು ಎಂದು ಕೃಷಿ ಸಚಿವರು ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಆಯುಕ್ತ ವೈ.ಎಸ್ ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಯು.ಪಿ.ಸಿಂಗ್, ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣರೆಡ್ಡಿ ಹಾಗೂ ಬೆಂಗಳೂರು, ಶಿವಮೊಗ್ಗ, ಧಾರವಾಡ, ರಾಯಚೂರು, ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Share This Article
error: Content is protected !!
";