ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿನನಿತ್ಯ ಕೆಸರೆರಚಾಟದಲ್ಲಿ ತೊಡಗಿರುವ ಕಮಲ ಕಲಿಗಳು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ತುಟಿ ಬಿಚ್ಚಲು ಒದ್ದಾಡುತ್ತಿರುವುದೇಕೆ?
ಆಗಾಗ ನಿದ್ದೆಯಿಂದ ಎದ್ದವರಂತೆ ತಡಬಡಿಸುತ್ತಿರುವ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್ ಅವರೇ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ತಮ್ಮದು ವಿಜಯೇಂದ್ರ ಬಣವೋ? ಯತ್ನಾಳ್ ಬಣವೋ? ಅಥವಾ ತಟಸ್ಥ ಬಣವೋ? ಎಂದು ನಾವು ಕೇಳುವುದಿಲ್ಲ. ದಯವಿಟ್ಟು ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದ್ವನಿಯೆತ್ತುವವರ ಬಣ ಸೇರಿಕೊಳ್ಳಿ ಎಂದು ಸಚಿವರು ತಾಕೀತು ಮಾಡಿದ್ದಾರೆ.
ನಿಮ್ಮ ಅವಧಿಯ 40% ಕರಾಮತ್ತನ್ನು ನೋಡಿಯೇ ಬಿಜೆಪಿಯನ್ನು ಕುರ್ಚಿಯಿಂದ ಕೆಳಗಿಳಿಸಿ, 138 ಕ್ಷೇತ್ರಗಳನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಉಪ ಚುನಾವಣೆಯಲ್ಲಿ ಮಕಾಡೆ ಮಲಗಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಿರುವ ನಿಮ್ಮಿಂದ ಖಾತೆ, ಕರ್ತವ್ಯ ನಿರ್ವಹಣೆಯ ಪಾಠ ಕಲಿಯಬೇಕಾದ ಅನಿವಾರ್ಯತೆ ನಮಗೆ ಬಂದಿಲ್ಲ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ನಿಮ್ಮದೇ ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆಯನ್ನು ಸದ್ದಿಲ್ಲದೇ ಏರಿಕೆ ಮಾಡಿರುವ ಬಗ್ಗೆ ಧ್ವನಿಯೆತ್ತಲು ಹೆದರುತ್ತಿರುವಿರೇಕೆ? ನಬಾರ್ಡ್ ಸಾಲದ ಮಿತಿಯನ್ನ ಕೇಂದ್ರ ಸರ್ಕಾರ ಕಡಿತಗೊಳಿಸಿರುವುದನ್ನು ಪ್ರಶ್ನಿಸಲು ಅಂಜುವ ನೀವು ಕರ್ನಾಟಕದಲ್ಲಿ ಸುಭಿಕ್ಷ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೊಸರಲ್ಲಿ ಕಲ್ಲು ಹುಡುಕುವುದೇ ವಿಪಕ್ಷ ನಾಯಕರ ಕೆಲಸ ಎನ್ನುವಂತೆ ವರ್ತಿಸುತ್ತಿರುವುದು ವಿಪರ್ಯಾಸ.
ಕರ್ನಾಟಕ ಕೃಷಿ ಇಲಾಖೆ ಸಾಧನೆಯ ಬಗ್ಗೆ ಪ್ರಶ್ನೆ ಎತ್ತಿರುವುದನ್ನು ಖಂಡಿತವಾಗಿಯೂ ಸ್ವಾಗತಿಸುತ್ತೇನೆ. ನಮ್ಮ ಇಲಾಖೆಯ ಸಾಧನೆಯನ್ನು ಗುರುತಿಸಿ, ಕೇಂದ್ರ ಸರ್ಕಾರವೆ ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ ಸಂಗತಿ ತಮ್ಮ ಗಮನಕ್ಕೆ ಬರದೇ ಇರುವ ಬಗ್ಗೆ ವಿಷಾದವಿದೆ ಎಂದು ಸಚಿವರು ತಿಳಿಸಿದ್ದಾರೆ.
ಬರ ಪರಿಹಾರಕ್ಕೆ ಸಂಬಂಧಿಸದಂತೆ ಹಣ ಮಂಜೂರು ಮಾಡಲು ಮೀನಾಮೇಷ ಎಣಿಸುತ್ತಿದ್ದ ಕೇಂದ್ರ ಸರ್ಕಾರದ ವಿರುದ್ಧ ಅನಿವಾರ್ಯವಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿ, ರಾಜ್ಯದ ರೈತರಿಗೆ ಅನ್ಯಾಯವಾಗುವುದನ್ನು ತಡೆಗಟ್ಟಿ, 3,454 ಕೋಟಿ ಅನುದಾನವನ್ನು ಪಡೆದುಕೊಂಡಿದ್ದೇವೆ.
ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 2,100 ಕೋಟಿಗೂ ಅಧಿಕ ಮೊತ್ತದ ಬೆಳೆ ವಿಮೆಯನ್ನು ಇತ್ಯರ್ಥ ಮಾಡಿದ್ದೇವೆ.
ರಾಜ್ಯದಲ್ಲಿ ಕೃಷಿ ಇಲಾಖೆ ಶೇ.99.07ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿದೆ.
ಕರ್ನಾಟಕ ಕೃಷಿ ಇಲಾಖೆ ಜಾರಿಗೆ ತಂದಿರುವ e-SAP ತಂತ್ರಜ್ಞಾನ ದೇಶಕ್ಕೇ ಮಾದರಿಯಾಗಿದೆ. ಇದನ್ನು ರಾಷ್ಟ್ರ ಮಟ್ಟದಲ್ಲಿ ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ವಿವಿಧ ಹಂತದ ಚರ್ಚೆಗಳನ್ನು ನಡೆಸಿದೆ.
2023-24ನೇ ಸಾಲಿನಲ್ಲಿ ರಾಜ್ಯದ ಕೃಷಿ ಇಲಾಖೆಯು ಕೇಂದ್ರ ಪುರಸ್ಕೃತ ನೆರವಿನ ಯೋಜನೆಯಡಿ ನಿಗದಿತ ಅವಧಿಯಲ್ಲಿ ವೆಚ್ಚ ಮಾಡಿ, ಪ್ರಗತಿ ಸಾಧಿಸಿದ್ದಕ್ಕಾಗಿ ಕೇಂದ್ರ ಸರ್ಕಾರವೇ ಹೆಚ್ಚುವರಿಯಾಗಿ 297 ಕೋಟಿ ಅನುದಾನವನ್ನು ಮಂಜೂರು ಮಾಡಿದೆ.
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಶೇ.124 ರಷ್ಟು ಅನುದಾನ ಬಳಸಿಕೊಂಡಿರುವ ಬಗ್ಗೆ ಕೇಂದ್ರ ಕೃಷಿ ಸಚಿವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಲಾನಯನ ಕಾರ್ಯಕ್ರಮಗಳ ಪ್ರಗತಿಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಈ ಕಾರ್ಯ ಸಾಧನೆಯನ್ನು ಹೊಗಳಿ ಕೇಂದ್ರ ಕೃಷಿ ಸಚಿವರು ಪತ್ರ ಬರೆದು ಹೆಚ್ಚುವರಿ 99 ಕೋಟಿ ಅನುದಾನವನ್ನು ನೀಡಿರುವ ಸಂಗತಿಯನ್ನು ಗೌರವ ಪೂರ್ವಕವಾಗಿ ತಮಗೆ ತಿಳಿಸುತ್ತಿದ್ದೇನೆ.
ಈ ಸಾಲಿನಲ್ಲಿ ಅತ್ಯುತ್ತಮ ಮಳೆಯಾಗಿದ್ದು, ನದಿಗಳು , ಜಲಾಶಯಗಳು ತುಂಬಿವೆ. ಎಲ್ಲಾ ಆಯಾಮಗಳಲ್ಲೂ ರೈತರಿಗೆ ಅನುಕೂಲವಾಗುವ ಹಾಗೆ ಕಾರ್ಯನಿರ್ವಹಿಸುತ್ತಿದ್ದೇವೆ.
ರಾಜ್ಯದಲ್ಲಿ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಮಾಡಿದ ಅನ್ಯಾಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಹಿಟ್ & ರನ್ ಮಾಡುವ ಬದಲು ಬಹಿರಂಗ ಚರ್ಚೆಗೆ ಬನ್ನಿ… ನಾಡಿನ ರೈತರಿಗೆ ನಮ್ಮ ಸರ್ಕಾರದ ಕೊಡುಗೆ ಏನು? ನಿಮ್ಮ ಸರ್ಕಾರ ಮಾಡಿದ್ದೇನು? ಎಂಬುದನ್ನು ಜನತೆಯ ಮುಂದಿಡೋಣ ಎಂದು ಸಚಿವ ಚಲುವರಾಯಸ್ವಾಮಿ ಸವಾಲ್ ಹಾಕಿದ್ದಾರೆ.