ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಾಮುಂಡಿ ಬೆಟ್ಟದ ಆಸ್ತಿ ಸರ್ಕಾರದ ಆಸ್ತಿ. ಎಲ್ಲೂ ಹಿಂದೂ ಧರ್ಮದ್ದು ಅಂತ ಹೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಾಜವಂಶಸ್ಥರು, ಸರ್ಕಾರ ಇಬ್ಬರೂ ಚಾಮುಂಡಿಯನ್ನು ನಾಡದೇವತೆ ಅಂತ ಕರೆಯುತ್ತೇವೆ.
ಇದು ಸರ್ಕಾರದ ಆಸ್ತಿ. ಎಲ್ಲೂ ಹಿಂದೂ ಧರ್ಮದ್ದು ಅಂತ ಹೇಳಿಲ್ಲ. ಹಿಂದೂಗಳು ಮಾತ್ರ ಬರಬೇಕು ಅಂತ ಇಲ್ಲ. ಎಲ್ಲಾ ಧರ್ಮದವರನ್ನೂ ಆಶೀರ್ವದಿಸುವ ದೇವತೆ. ನಾಡಹಬ್ಬಕ್ಕೆ ವಿದೇಶಿಗರೂ ಬರ್ತಾರೆ. ಬೇರೆ ಧರ್ಮದವರೂ ಬರ್ತಾರೆ ಎಂದು ಶಿವಕುಮಾರ್ ತಿಳಿಸಿದರು.
ಚಾಮುಂಡಿಬೆಟ್ಟ ಸರ್ಕಾರದ ಆಸ್ತಿ ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುನರುಚ್ಛರಿಸಿದರು.
ಮಾಧ್ಯಮಗಳೊಂದಿಗೆ ಮಾತಾಡಿದ ಅವರು ದಸರಾ ಹಬ್ಬವನ್ನು ನಾಡಹಬ್ಬವೆಂದು ಆಚರಿಸುತ್ತೇವೆ, ಹಿಂದಿನ ಮಹಾರಾಜರು ಮತ್ತು ಸರ್ಕಾರ ಜೊತೆಗೂಡಿ ತೆಗೆದುಕೊಂಡ ನಿರ್ಣಯ ಅದು, ಚಾಮುಂಡಿ ತಾಯಿ ನಾಡಿನ ಎಲ್ಲ ಜನರನ್ನು ಆಶೀರ್ವದಿಸುತ್ತಾಳೆ, ದಸರಾ ಉತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು, ಧಾರ್ಮಿಕ ಆಚರಣೆಗಳು ಅವರವರ ನಂಬಿಕೆ, ಶ್ರದ್ಧೆಗಳಿಗೆ ಬಿಟ್ಟ ವಿಚಾರ ಎಂದು ಶಿವಕುಮಾರ್ ಹೇಳಿದರು.
ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವಿದೇಶಿಯರು ಕೂಡ ಬರುತ್ತಾರೆ, ಅವರೆಲ್ಲ ಯಾವ ಧರ್ಮದವರು? ಎಂದು ಶಿವಕುಮಾರ್ ಪ್ರಶ್ನಿಸುತ್ತಾರೆ.
ಮಹಾರಾಜರು ನಾಡಹಬ್ಬಕ್ಕೆ ವಿದೇಶಿಯರನ್ನು ಆಹ್ವಾನಿಸುತ್ತಿದ್ದರು. ಅವರೆಲ್ಲ ಯಾವ ಸಮುದಾಯಕ್ಕೆ ಸೇರಿದವರು? ಎಂದು ಪ್ರಶ್ನಿಸಿದ ಡಿಸಿಎಂ, ಬಾನು ಮುಷ್ತಾಕ್ ಬೆಟ್ಟ ಹತ್ತಬಾರದು ಅಂದ್ರೆ ಹೇಗೆ? ಎಂದು ಶಿವಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿದರು.
ನೀರು, ಸೂರ್ಯ, ದೇವರಿಗೆ ಧರ್ಮವಿಲ್ಲ. ಕ್ರಿಶ್ಚಿಯನ್ನರ ಚರ್ಚ್, ಮುಸ್ಲಿಮರ ಮಸೀದಿಗೆ ನಮ್ಮನ್ನು ಬಿಡಲ್ವೇ?. ಗೊಮ್ಮಟಗಿರಿಗೆ ನಮ್ಮನ್ನು ಬಿಡುವುದಿಲ್ವೇ?. ಅವರು ನಮ್ಮನ್ನು ಬರಬಾರದು ಅಂತ ಹೇಳ್ತಾರಾ ಎಂದು ಡಿಸಿಎಂ ಶಿವಕುಮಾರ್ ಖಾರವಾಗಿ ಪ್ರಶ್ನಿಸಿದರು.
ಇತಿಹಾಸ ಮರೆತ ಯದುವೀರ್:
ಸಂಸದ ಯದುವೀರ್ ಅವರು ಇತಿಹಾಸ ಮರೆತಿದ್ದಾರೆ. ಈಗ ಅವರು ಬಿಜೆಪಿ ಸೇರಿದ್ದಾರೆ. ನಾವು ಗೃಹಲಕ್ಷ್ಮಿಹಣ ಚಾಮುಂಡಿ ಮುಂದಿಟ್ಟು ಪೂಜಿಸಿದ್ವಿ. ಎಲ್ಲಾ ಧರ್ಮದವರಿಗೆ ಗ್ಯಾರಂಟಿ ಕೊಡ್ತಿದ್ದೇವೆ. ಹೀಗಾಗಿ ಜಾತಿ ಧರ್ಮದ ಬಣ್ಣ ಕಟ್ಟಬಾರದು ಎಂದು ತಿಳಿಸಿದರು.
ನಾವು ಹಿಂದುತ್ವದವರು:
ನಮಗಿಂತ ಬ್ಯಾರಿಗಳು ಕನ್ನಡ ಚೆನ್ನಾಗಿ ಮಾತಾಡ್ತಾರೆ. ಅವರನ್ನು ತಳ್ಳುವುದಕ್ಕೆ ಆಗುತ್ತಾ?. ನಮ್ಮನ್ನು ನೀವು ಬರಬೇಡಿ ಅಂತಾರಾ?. ಬಿಜೆಪಿಗಿಂತ ನಾವು ಹೆಚ್ಚು ಹಿಂದುತ್ವದವರು. ದೇಶದಲ್ಲಿ ಇರೋರನ್ನು ಓಡಿಸೋಕೆಆಗುತ್ತಾ ಎಂದು ಉಪಮುಖ್ಯಮಂತ್ರಿ ಪ್ರಶ್ನಿಸಿದರು.
ಜೆಡಿಎಸ್ ಲೀಡರ್ಗೆ ಹೆದರಲ್ಲ:
ಜೆಡಿಎಸ್ ಎಕ್ಸ್ ಪೋಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ಜೆಡಿಎಸ್ ಯಾವಾಗಲೂ ಫೇಕ್. ಬೇಕಿದ್ದರೆ ಅವರು ಟೀಕೆ ಮಾಡಲಿ. ಅವರ ದೊಡ್ಡ ಲೀಡರ್ಗೆ ನಾನು ಹೆದರಲ್ಲ. ಆದರೆ ಈ ರೀತಿ ಮಾಡೋದು ಸರಿಯಲ್ಲ ಎಂದು ಟೀಕಿಸಿದರು.

