ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಪರಮ ಪೂಜ್ಯ ಶ್ರೀ ಮಲ್ಲಣ್ಣ ಕಟ್ಟಿಮನಿ ರವರ ಸ್ಮರಣಾರ್ಥವಾಗಿ, ಶ್ರೀ ಭುವನೇಶ್ವರಿ ದೇವಿ ಟ್ರಸ್ಟ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಚಂದನ್ ಅವಂಟಿ ಅವರು ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆ ಮೆರೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ತೀವ್ರ ಸ್ಪರ್ಧೆಯ ನಡುವೆಯೂ ಕು. ಚಂದನ್ ಎಸ್. ಅವಂಟಿ ಅವರು “ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಮತದಾರರ ಪಾತ್ರ” ಎಂಬ ವಿಷಯದ ಮೇಲೆ ಆಳವಾದ ಚಿಂತನೆ, ವಿಶ್ಲೇಷಣೆ ಮತ್ತು ಸರಳ ಅಭಿವ್ಯಕ್ತಿಯಿಂದ ತೀರ್ಪುಗಾರರ ಮನ ಗೆದ್ದಿದ್ದಾರೆ.
ವಿದ್ಯಾರ್ಥಿಯಾಗಿದ್ದರೂ ರಾಜಕೀಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಅವರು, ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಅಗತ್ಯವನ್ನು ತಮ್ಮ ಪ್ರಬಂಧದಲ್ಲಿ ಹೊಂದಿದ್ದು, ಮತದಾರರು ದೇಶದ ಭವಿಷ್ಯ ರೂಪಿಸುವ ಶಕ್ತಿಶಾಲಿ ಅಸ್ತ್ರವೆಂಬ ಸಂದೇಶವನ್ನು ಪ್ರಸ್ತಾಪಿಸಿದ್ದಾರೆ.
ಅವರ ಈ ರಾಜಕೀಯ ಚಿಂತನೆ ಹಾಗೂ ಬೌದ್ಧಿಕ ಕೌಶಲ್ಯವನ್ನು ಗುರುಗಳು ಹಾಗೂ ತೀರ್ಪುಗಾರರು ಮೆಚ್ಚಿಕೊಂಡಿದ್ದು ಚಂದನ್ ಎಸ್. ಅವಂಟಿ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಭವಿಷ್ಯದ ಶಿಕ್ಷಣ-ಸಾಹಿತ್ಯ-ರಾಜಕೀಯ ಪಯಣದಲ್ಲಿ ಮುಂದೆ ಸಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶುಭಾಶಯ ಕೋರಿದ್ದಾರೆ.

