ಮಹಿಳೆಯರ ಬಗೆಗಿನ ಮನೋಭಾವನೆ ಬದಲಾಯಿಸಿಕೊಳ್ಳಿ-
ಭಾರತಿ ಹೆಗಡೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮಹಿಳೆಯರ ಮೇಲೆ ನಿರಂತರ ಶೋಷಣೆಗಳು ನಡೆಯುತ್ತಿವೆ. ಅವುಗಳನ್ನು ಖಂಡಿಸುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಮಹಿಳೆಯರ ಬಗೆಗಿನ ಮನೋಭಾವನೆ ಬದಲಾಯಿಸಿಕೊಳ್ಳಬೇಕು ಎಂದು ಪತ್ರಕರ್ತೆ ಭಾರತಿ ಹೆಗಡೆ ಹೇಳಿದರು.
ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವುಗಳ ಆಶ್ರಯದಲ್ಲಿ ಆಯೋಜಿಸಿರುವ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದ ಪತ್ರಿಕೆಗಳು ಮತ್ತು ಮಹಿಳಾ ಸಾಹಿತ್ಯ ಕುರಿತಾದ ಗೋಷ್ಠಿಯಲ್ಲಿ ಮಾತನಾಡಿದರು.
ಇಂದು ಮಹಿಳಾ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅವಶ್ಯವಿದೆ. ಅವಮಾನ, ಅಸ್ಮಿತೆಯನ್ನು ಹೋಗಲಾಡಿಸಬೇಕಾಗಿದೆ. ಆರೋಗ್ಯಯುತ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಬಹಳ ಅವಶ್ಯಕ. ಮಹಿಳೆಯರ ಪರ ಸೂಕ್ಷ್ಮತೆ ಬರಬೇಕು. ಮಹಿಳೆಯರಿಗೆ ತನ್ನದೇಯಾದ ಘನತೆ ಬೇಕಾಗಿದೆ. ಮಹಿಳೆಯರ ಕುರಿತಾದ ಬರಹಗಳನ್ನು ಪುರುಷರು ಸಹ ಓದಬೇಕಾಗುತ್ತದೆ ಎಂದರು.
ಮಹಾಮಾರಿ ಕರೋನಾ ಅಪ್ಪಳಿಸಿದ ಬಳಿಕ ಸಾಕಷ್ಟು ಮಹಿಳಾ ಪುರವಣಿಗಳು ಪ್ರಕಟವಾಗುವುದನ್ನು ನಿಲ್ಲಿಸುವುದು. ಮಹಿಳಾ ಪುರವಣಿಗಳು ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ನಮ್ಮ ಧೋರಣೆಗಳನ್ನು ಬದಲಾಯಿಸಿಕೊಳ್ಳಬೇಕು. ಮಹಿಳೆಯರ ಸಮಸ್ಯೆಗಳು ಇಂದಿಗೂ ಸಾಕಷ್ಟಿವೆ. ಧಾರಾವಾಹಿ, ಕಥೆ, ಕವಿತೆ, ಕಾದಂಬರಿಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಪತ್ರಿಕೆಗಳಲ್ಲಿ ಸಹ ಮಹಿಳಾ ಬರಹಗಳಿಗೆ ಒತ್ತು ನೀಡಬೇಕಿದೆ. ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಬಾರದು. ಮಹಿಳೆಯರು ಸಾಮಾಜಿಕ ಮಾಧ್ಯಮ, ವಿವಿಧ ವೇದಿಕೆಗಳ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಬಾನು ಮುಸ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರೆತ ನಂತರ ಅವರಿಗೆ ಗೌರವ ದೊರೆಯುತ್ತಿದೆ. ಆದರೆ ಈ ಮೊದಲು ಅವರು ಯಾರೂ ಎಂಬುದು ಸಹ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ಮಹಿಳೆಯರಿಗೆ ಸ್ಥಾನಮಾನಗಳು ದೊರೆಯುವಂತೆ ಆಗಬೇಕು ಎಂದು ವಿವರಣೆ ನೀಡಿದರು.
ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದರು. ಈ ಸಂದರ್ಭದಲ್ಲಿ ಸುಮನಾ ಎಸ್ ಅಂಗಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್, ಸದಸ್ಯ ಸಂಚಾಲಕಿ ಡಾ.ಪಿ.ಚಂದ್ರಿಕಾ, ಶಿಬಿರದ ಸಹ ನಿರ್ದೇಶಕಿ ಮಮತಾ ಅರಸೀಕೆರೆ ಸೇರಿದಂತೆ ಶಿಬಿರಾರ್ಥಿಗಳು ಇತರರು ಉಪಸ್ಥಿತರಿದ್ದರು.
ಮಹಿಳಾ ಪತ್ರಿಕೋದ್ಯಮದ ಬೆಳೆದು ಬಗೆ-ತಿರುಮಲಾಂಬ ಅವರು ಕರ್ನಾಟಕ ನಂದಿನಿ ಎಂಬ ಪತ್ರಿಕೆಯನ್ನು ಆರಂಭಿಸುವ ಮೂಲಕ ಮಹಿಳಾ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದರು. 1913 ರಲ್ಲಿ ಸತಿ ಹಿತೈಷಿ ಎಂಬ ಗ್ರಂಥ ಮಾಲೆಯನ್ನು ಹೊರ ತಂದರು.ಅದರಲ್ಲಿ 41 ಪುಸ್ತಕಗಳಿದ್ದು, ಸುಮಾರು 28 ಪುಸ್ತಕಗಳನ್ನು ಸ್ವತಃ ತಿರುಮಲಾಂಬ ಅವರು ಬರೆದಿದ್ದಾರೆ. ಆರ್.ಕಲ್ಯಾಣಮ್ಮ ಅವರು ಸರಸ್ವತಿ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ನಂತರದಲ್ಲಿ ಚಿತ್ರಾ, ಸುಹಾಸಿನಿ, ಸೋದರಿ, ಜಯ ಕರ್ನಾಟಕ, ವೀರಮಾತೆ, ಗಿರಿಬಾಲೆ, ಸುಪ್ರಭಾತ ಎಂಬ ಮಹಿಳಾ ಪತ್ರಿಕೆಗಳು ಹುಟ್ಟಿಕೊಂಡವು. 80 ರ ದಶಕದಲ್ಲಿ ಅಚಲಾ ಹಾಗೂ ನವಮಾನಸ ಪತ್ರಿಕೆಗಳು ಆರಂಭವಾದವು ಎಂದು ವಿವರಿಸಿದರು.

