ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಪೂರ್ಣಗೊಳಿಸಲು ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಡಿಸೆಂಬರ್-2025 ರ ಅಂತ್ಯದೊಳಗೆ ಪ್ರಾಯೋಗಿಕವಾಗಿ ನೀರು ಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ವಿಕಾಸಸೌಧ ಕೊಠಡಿ ಸಂಖ್ಯೆ 342ರಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಐಮಂಗಲ ಹೋಬಳಿ ವ್ಯಾಪ್ತಿಯಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿ ಅಂತರ್ಜಲ ಮಟ್ಟ ಕುಸಿದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಈ ಭಾಗದ ರೈತರು ಸಂಕಷ್ಟದಲ್ಲಿರುತ್ತಾರೆ ಎಂದು ತಿಳಿಸಿದ ಸಚಿವರು, ತುರ್ತಾಗಿ ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಬೇಕಾಗಿರುವುದರಿಂದ, ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಹಿರಿಯೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯ ನಿರ್ಮಾಣದ ಕಿ.ಮೀ. 97.00 ರಿಂದ 97.40 ಕಿ.ಮೀ.ವರೆಗೆ ಇರುವ 124 ಮೀ. ಕಾಮಗಾರಿ ಬಾಕಿ ಇದ್ದು, ಈ ಭಾಗದ ಕಾಮಗಾರಿ ಕೈಗೊಳ್ಳಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು, ಭೂಸ್ವಾಧೀನ ಪರಿಹಾರ ಮೊತ್ತ ಸಹ ಸರ್ಕಾರದಿಂದ ಬಿಡುಗಡೆಯಾಗಿರುತ್ತದೆ. ಈ ಕೂಡಲೇ ಸಂಬಂಧಿಸಿದ ಜಮೀನುದಾರರಿಗೆ ಈ ಪರಿಹಾರ ಮೊತ್ತವನ್ನು ಪಾವತಿ ಮಾಡಿ, ಇಲ್ಲವೇ ಭೂಸ್ವಾಧೀನದ ಮೊತ್ತವನ್ನು ಕೋರ್ಟಗೆ ಡಿಪಾಸಿಟ್ ಮಾಡಿ ಕಾಮಗಾರಿ ಭಾಗವನ್ನು ಸ್ವಾಧೀನಪಡಿಸಿಕೊಂಡು ತುರ್ತಾಗಿ ಕಾಮಗಾರಿ ಕೈಗೊಳ್ಳಲು ತಾಕೀತು ಮಾಡಿದರು.
ಈ ಕಾಮಗಾರಿಯಲ್ಲಿ ಐಮಂಗಲ ಹೋಬಳಿ ಚಿಕ್ಕ ಸಿದ್ದವ್ವನಹಳ್ಳಿ ಕೆರೆ ಕೈಬಿಟ್ಟು ಹೋಗಿರುವ ಬಗ್ಗೆ ಪ್ರಸ್ತಾಪಿಸಿದಾಗ, ವ್ಯವಸ್ಥಾಪಕ ನಿರ್ದೇಶಕರು ಈ ಟೆಂಡರ್ ಕಾಮಗಾರಿಗಳು ಪ್ರಾರಂಭವಾದಾಗ ಈ ಕೆರೆಯನ್ನು ಸೇರ್ಪಡೆಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಯಾವುದಾದರೂ ಮೂಲದಿಂದ ಕೆರೆಗೆ ನೀರು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಇವರು ಪ್ರಗತಿ ವರದಿ ಮಂಡಿಸುತ್ತಾ, ಚಿತ್ರದುರ್ಗ ಶಾಖಾ ಕಾಲುವೆಯು ಐಮಂಗಲ ಹೋಬಳಿಯಲ್ಲಿ ಕಿ.ಮೀ. 82.18 ರಿಂದ 102.50 ಕಿ.ಮೀ. ವರೆಗೆ ಹಾದುಹೋಗುತ್ತಿದ್ದು, ಈ ಕಾಲುವೆಯಿಂದ ಬ್ಲಾಕ್-5 ರಲ್ಲಿ ರೂ.370.90 ಕೋಟಿ, ಬ್ಲಾಕ್-6 ರಲ್ಲಿ ರೂ.781.14 ಕೋಟಿ, ಬ್ಲಾಕ್-7 ರಲ್ಲಿ ರೂ.246.13 ಕೋಟಿ ಮತ್ತು ಬ್ಲಾಕ್-8 ರಲ್ಲಿ ರೂ. 22.96 ಕೋಟಿಗಳೆಂದು ಕಾಮಗಾರಿಗಳನ್ನು ವಿಂಗಡಿಸಿದ್ದು, ಒಟ್ಟು ರೂ.1421.13 ಕೋಟಿಗಳ ಕಾಮಗಾರಿಗಳನ್ನು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿರುತ್ತದೆ. ಸದರಿ ಕಾಮಗಾರಿಗಳ ಟೆಂಡರ್ ಅನುಮೋದನೆಯನ್ನು ದಿನಾಂಕ.06.11.2025 ರಂದು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಉಪಮುಖ್ಯ ಮಂತ್ರಿಗಳ ಅಧ್ಯಕ್ಷತೆ ಮತ್ತು ಉಪಾಧ್ಯಕ್ಷತೆಯಲ್ಲಿ ಜರುಗಲಿರುವ ನಿಗಮ ಮಂಡಳಿ ನಿರ್ದೇಶಕರ ಸಭೆಯಲ್ಲಿ ಅನುಮೋದನೆ ದೊರೆಯಲಿದ್ದು, ನವಂಬರ್-2025 ರ ಅಂತ್ಯದೊಳಗೆ ಕಾಮಗಾರಿ ಪ್ರಾರಂಭಿಸಬಹುದಾಗಿರುತ್ತದೆ ಎಂದು ತಿಳಿಸಿದರು.
ಈ ಯೋಜನೆಯ ಮೂಲ ಅಂದಾಜಿನಲ್ಲಿ ಮೊದಲು ಐಮಂಗಲ ಹೋಬಳಿಯ 12 ಕೆರೆಗಳು ಸೇರ್ಪಡೆಗೊಳಿಸಲಾಗಿದ್ದು, ನಂತರ ದಿನಾಂಕ 09.07.2024 ರಂದು ನಡೆದ 8ನೇ ಡ್ರಿಪ್ ಕಮಿಟಿ ಸಭೆಯಲ್ಲಿ ಗ್ರಾವಿಟಿ ಎನ್ರೂಟ್ನಲ್ಲಿ ಬರುವ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಂಡು ಅಂದಾಜು ಪಟ್ಟಿಯಲ್ಲಿ ಅಳವಡಿಸಲು ಸೂಚಿಸಿದ್ದರನ್ವಯ ಹೆಚ್ಚುವರಿಯಾಗಿ 42 ಕೆರೆಗಳನ್ನು ಸೇರ್ಪಡೆಗೊಳಿಸಿ ಒಟ್ಟು 56 ಕೆರೆಗಳನ್ನು ತುಂಬಿಸಲು ಈ ಟೆಂಡರ್ ಕಾಮಗಾರಿಯಲ್ಲಿ ಸೇರ್ಪಡೆಗೊಳಿಸಲಾಗಿರುತ್ತದೆ ಮತ್ತು ಐಮಂಗಲ ಹೋಬಳಿಯ ವ್ಯಾಪ್ತಿಯ 32,775 ಹೆಕ್ಟೆರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸಲು ಯೋಜಿಸಲಾಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಎಜಾಜ್ ಹುಸೇನ್, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನೀಯರ್ ಎಫ್.ಹೆಚ್.ಲಮಾಣಿ, ಅಧೀಕ್ಷಕ ಇಂಜಿನಿಯರ್ .ಕೆ.ಟಿ.ಹರೀಶ್, ಕಾರ್ಯಪಾಲಕ ಇಂಜಿನೀಯರ್ ಬಾರಿಕರ ಚಂದ್ರಪ್ಪ, ಮುಖಂಡರಾದ ಅಮೃತೇಶ್ವರ ಸ್ವಾಮಿ, ಎಂ.ಡಿ.ಕೋಟೆ ಚಂದ್ರಪ್ಪ, ಈರಲಿಂಗೇಗೌಡ, ಖಾದಿರಮೇಶ್, ಕಂದಿಕೆರೆ ಸುರೇಶಬಾಬು,
ಐಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ತಾ.ಪಂ ಅಧ್ಯಕ್ಷ ಮಾಜಿ ಗೌನಹಳ್ಳಿ ಚಂದ್ರಪ್ಪ, ಹಿರಿಯೂರು ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸೂರಗೊಂಡನಹಳ್ಳಿ ಕೃಷ್ಷಮೂರ್ತಿ, ಕಲ್ಲಹಟ್ಟಿ ಹರೀಶ್, ತಾ.ಪಂ ಮಾಜಿ ಸದಸ್ಯರಾದ ಮುಕುಂದ, ಗಿಡ್ಡೋಬಹಳ್ಳಿ ಅಶೋಕ್, ತಾಳವಟ್ಟಿ ಸಿದ್ದಾಭೋವಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಇದ್ದರು.

