ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಯಮ ಅನುಸಾರ ಸಮಯ ಪಾಲನೆ ಮಾಡದೇ ಇರುವುದರಿಂದ ಪಡಿತರ ಚೀಟಿದಾರರಿಗೆ ತೀವ್ರ ತೊಂದರೆಯಾಗುತ್ತಿದ್ದು ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಯುವ ಸಂಚಲನ ವತಿಯಿಂದ ಹೋರಾಟ ಕೈಗೊಳ್ಳಲಾಗುವುದು ಎಂದು ಸಂಘಟನೆಯ ಮುಖಂಡ ಚಿದಾನಂದ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಯಮ ಅನುಸಾರ ಮಂಗಳವಾರ ಹಾಗೂ ಸರ್ಕಾರಿ ರಜೆ ಹೊರತುಪಡಿಸಿ ಪ್ರತಿ ಮಾಹೆ 11ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ಬಾಗಿಲು ತೆರೆಯದ ಕಾರಣ ಅಂದಾಜು 70,000 ಪಡಿತರ ಚೀಟಿದಾರರು. ಸುಮಾರು 2.50.000 ಫಲಾನುಭವಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಬಹು ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಮಹಿಳೆಯಾರಿಗೆ ದಿನಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸದೆ ಇರುವುದು ಆಹಾರ ಇಲಾಖೆಯ ಅಂಕಿಅಂಶಗಳಲ್ಲಿಯೇ ಇದ್ದರೂ,ಈ ಬಗ್ಗೆ ಕಳೆದ ಎರಡು ವರ್ಷದಿಂದ ನಿರಂತರವಾಗಿ ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳಿಗೆ ಲಿಖಿತವಾಗಿ ಹಾಗೂ ಮೌಕಿಕವಾಗಿ ಅನೇಕ ಬಾರಿ ಮನವಿ ನೀಡಿದರೂ, ಹೋರಾಟ ಮಾಡಿದ್ದರೂ, ಇದುವರೆಗೂ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆ ಹರಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಈ ಸಮಸ್ಯೆಯನ್ನು ಶೀಘ್ರವೇ ಬಗೆ ಹರಿಸದೆ ಇದ್ದಲ್ಲಿ ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ತಿಳಿಸಿದ್ದಾರೆ. ಸುದ್ದಿಗೊಷ್ಟಿಯಲ್ಲಿ ಯುವ ಸಂಚಲನ ಸಂಘಟನೆಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.