ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀ ದೇವಿ ಮತ್ತು ಚಿದಾನಂದಾವಧೂತ ಭಕ್ತ ವೃಂದದವರಲ್ಲಿ ಲೇಖಕರು, ಚಿಂತಕರಾದ ಜಿ.ಎಸ್.ಕೆಂಚಪ್ಪ ಅವರು ಬಹಿರಂಗ ಪತ್ರ ಬರೆದು ಸಾಧಕರ ಬಗ್ಗೆ ತಪ್ಪು ಸಂದೇಶ ನೀಡಬೇಡಿ ಎಂದು ಸಾರ್ವಜನಿಕರು, ಬರಹಗಾರರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಇತ್ತೀಚೆಗೆ ನನ್ನ ಗಮನಕ್ಕೆ ಬಂದಂತೆ ಕೆಲವು ಸಾಹಿತಿಗಳು, ಲೇಖರು, ಮುದ್ರಣ ಪ್ರಕಾಶಕರೊಂದಿಗೆ ಕೈಜೋಡಿಸಿ ತಮಗೆ ಮನ ಬಂದಂತೆ ಚಿದಾನಂದರ ಮೂಲ ಗ್ರಂಥವನ್ನು ಬದಲಾವಣೆ ಮಾಡುತ್ತಿದ್ದಾರೆ ಎಂದು ಕೆಂಚಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಿರುಚಲಾದ ಮಾಹಿತಿ;
ದೇವಿ ಮಹಾತ್ಮೆ ಮೂಲ ಗ್ರಂಥದಲಿ 796 ಷಟ್ಪದಿಗಳಿದ್ದರೂ ಅದನ್ನು 804 ಷಟ್ಪದಿಗೆ ಏರಿಸಿದ್ದಾರೆ. ಅಂದರೆ ಸುಮಾರು ಎಂಟು ಹೊಸ ಪದ್ಯಗಳನ್ನು ಸ್ವಂತ ರಚಸಿ ಗ್ರಂಥಕ್ಕೆ ಸೇರಿಸಲಾಗಿದೆ. ಇದು ಯೋಗ್ಯ ಕೆಲಸವೇ?
ಜಾಣತನದಿಂದ ಗ್ರಂಥದೊಳಗೆ ಅಲ್ಲಲ್ಲಿ ಸೇರಿಸಿದ್ದಾರೆ. ಇದು ಚಿದಾನಂದ ಅವಧೂತರಿಗೆ ಎಸಗಿದ ಅಪರಾಧ. ಅಧರ್ಮ ಕಾರ್ಯವಲ್ಲವೆ? ಎಂದು ತೀಕ್ಷ್ಣವಾಗಿ ಅವರು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ಚಿದಾನಂದರ ಅಂಕಿತವನ್ನು ಬದಲಾಯಿಸಿರುವುದು ಗಮನಕ್ಕೆ ಬಂದಿದೆ. ಹೀಗೆ ಅಂಕಿತ ಪರಿವರ್ತನೆ/ ಮಾರ್ಪಾಡು ಮಾಡುವುದು ಕೃತಿ ಚೌರ್ಯ ಮತ್ತು ಕಾನೂನು ಭಂಗ ಎನಿಸುವದಿಲ್ಲವೇ?
ಚಿದಾನಂದರ “ನಾರಾಯಣಿ ಸ್ತುತಿ” ಎಂಬ ಕೃತಿಯಲ್ಲಿ ಅಲ್ಲಲ್ಲಿ ಭಾಗಶಃ ಶಬ್ದ ಮಾರ್ಪಾಡು ಮಾಡಲಾಗಿದೆ ಹಾಗೂ ಪದ್ಯಗಳ ಸಂಖ್ಯೆ ಸಹ ಹೆಚ್ಚಿಸಿದ್ದಾರೆ. ಇದು ಕೂಡ ಅಪರಾಧವಲ್ಲವೇ? ಎಂದು ಕೆಂಚಪ್ಪನವರ ಪ್ರಶ್ನೆಯಾಗಿದೆ.
ಚಿದಾನಂದರ ಸಮಾಧಿಯ ಬಗ್ಗೆ ನಿಖರ, ಸ್ಪಷ್ಟ, ವಾಸ್ತವ ಪುರಾವೆ / ದಾಖಲಾತಿ ಒದಗಿಸದೆ, ಕೇವಲ ಅವರಿವರ ಮೌಖಿಕ ಮಾತನ್ನು ಆಧಾರವಾಗಿಟ್ಟುಕೊಂಡು ಕನಕಗಿರಿಯಲ್ಲಿ ಚಿದಾನಂದ ಸಮಾಧಿ ಉಂಟು ಎಂದು ಬರೆಯುತ್ತಿದ್ದಾರೆ. ಈ ಬಗ್ಗೆ ನಮ್ಮ ತಕರಾರು ಏನೂ ಇಲ್ಲ, ಅದು ನಿಜವಾಗಿದ್ದಲ್ಲಿ ಲಿಖಿತರೂಪ ಪುರಾವೆ/ ದಾಖಲೆ ನೀಡಲು ಕೆಂಚಪ್ಪ ಅವರು ಮನವಿ ಮಾಡಿದ್ದಾರೆ.
ಚಿದಾನಂದ ಜೀವನ ಚರಿತ್ರೆ ಲಭ್ಯವಿಲ್ಲ ಎಂದು ಯೂಟ್ಯೂಬ್ ಒಂದರಲ್ಲಿ ಸತ್ಯಕ್ಕೆ ದೂರವಾದ ಮಾಹಿತಿ ನೀಡುತ್ತಿದ್ದಾರೆ. ಇದು ಭಕ್ತ ವೃಂದಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಈ ಕೆಲಸ ಆಗಬಾರದು. ಇದಕೆ ಕಡಿವಾಣ ಬೇಡವೇ?
ಹೀಗೆ ಚಿದಾನಂದರಿಗೆ ಮತ್ತು ಚಿದಾನಂದ ಸಾಹಿತ್ಯಕ್ಕೆ ಮಸಿ ಬಳಿಯುವ ಕೆಲಸ , ಅಂಕಿತವನ್ನು ಮಾರ್ಪಾಡು ಮಾಡೋ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದ್ದರೂ ದೇವಿ ಭಕ್ತರು, ಸಾಹಿತ್ಯ ಅಭಿಮಾನಿಗಳು ಸುಮ್ಮನೆ ದೇವಿ ಪುರಾಣ ಓದಿ, ನೈವೇದ್ಯ ಮಾಡಿ ತೆಪ್ಪಗೆ ಇದ್ದರೆ ಮೂಲ ಕೃತಿ ಉಳಿಯುವದಾದರೂ ಹೇಗೆ? ಮುಂದಿನ ಪೀಳಿಗೆಗೆ ವಾಸ್ತವ ಸಂಗತಿ ಉಳಿಯುವುದೆ?

ಈ ಬಗ್ಗೆ ಸ್ವಲ್ಪ ಯೋಚಿಸಿ ಮಹಾಶಯರೇ, ಇದಕೊಂದು ಕಡಿವಾಣ ಹಾಕುವ ಪ್ರಯತ್ನವನ್ನು ಚಿದಾನಂದ ಭಕ್ತರು ಮಾಡಬೇಕಲ್ಲವೇ? ಇದು ದೇವಿ ಭಕ್ತ ಕೋಟಿಯ ಕರ್ತವ್ಯವಲ್ಲವೇ? ಏನಂತೀರಾ…..?
ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯ, ಅನಿಸಿಕೆ, ತೆಗೆದುಕೊಳ್ಳಬೇಕಾದ ಕ್ರಮ ಹೇಗೆ? ತಿಳಿಸಲು ಚಿಂತಕರಾದ ಜಿ. ಎಸ್. ಕೆಂಚಪ್ಪ ಅವರು ಮನವಿ ಮಾಡಿದ್ದಾರೆ.

