ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಈಗಲೂ ಶಾಸಕರ ಅಭಿಪ್ರಾಯ ಪಡೆಯಬಹುದು. ಶಾಸಕರ ಅಭಿಪ್ರಾಯ ಬೇಡ ಅಂತಲೂ ಹೈಕಮಾಂಡ್ ತೀರ್ಮಾನಿಸಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸದಾಶಿನನಗರ ನಿವಾಸದ ಬಳಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ಹೊರತು ಶಾಸಕರ ಆಯ್ಕೆಯಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಆಯ್ಕೆಯಲ್ಲಿ ಶಾಸಕರ ಬಲವೇ ಮುಖ್ಯ. ಪಕ್ಷ ಗೆದ್ದ ಮೇಲೆ ಸಿಎಂ ಆಯ್ಕೆ ಆಗುತ್ತದೆ. ಶಾಸಕರ ಅಭಿಪ್ರಾಯ ಪಡೆದು ಮಾಡ್ತಾರೆ. ಹೈಕಮಾಂಡ್ ಅಬ್ಸರ್ವರ್ಸ್ ಕಳಿಸುತ್ತದೆ. ಅವರು ಶಾಸಕರ ಅಭಿಪ್ರಾಯ ಕೇಳ್ತಾರೆ. ಇಷ್ಟು ಜನ ಈ ರೀತಿ ಹೇಳಿದ್ದಾರೆ, ಉಳಿದವರು ಈ ರೀತಿ ಹೇಳಿದ್ದಾರೆ ಅಂತ ಹೇಳುತ್ತಾರೆ. ಮೊದಲ ಬಾರಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ಹೀಗೆ. ಈಗಲೂ ಶಾಸಕರ ಅಭಿಪ್ರಾಯ ಪಡೆಯಬಹುದು. ಶಾಸಕ ಅಭಿಪ್ರಾಯ ಬೇಡ ಅಂತ ಹೈಕಮಾಂಡ್ ತೀರ್ಮಾನಿಸಬಹುದು ಎಂದು ಡಾ.ಪರಮೇಶ್ವರ್ ಸೂಚ್ಯವಾಗಿ ತಿಳಿಸಿದರು.
ಸಹಜವಾಗಿ ಹೇಳಿದ್ದೆ: ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಅಂತ ನೀವು ಹೇಳಿದ್ರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಗೃಹ ಸಚಿವರು, ಸಹಜವಾಗಿ ನಾನು ಹೇಳಿದ್ದೆ. ಎಲ್ಲರೂ ಸಿಎಂ ಆಗಬಹುದು. ಹೈಕಮಾಂಡ್ ಯಾರನ್ನು ಮಾಡುತ್ತದೆ, ಅವರಿಗೆ ಜೈ ಅನ್ನುತ್ತೇವೆ. ಡಿಕೆಶಿ, ಸಿದ್ದರಾಮಯ್ಯ ಇಬ್ಬರು ಮೊದಲ ಸಾಲಿನಲ್ಲಿದ್ದರು. ನಾವು ಸೆಕೆಂಡ್ ಇದ್ದೇವೆ ಅಷ್ಟೇ ಎಂದು ನಾನು ಸಿಎಂ ಆಕಾಂಕ್ಷಿ ಅನ್ನೋದನ್ನು ಪರೋಕ್ಷವಾಗಿ ಮತ್ತೆ ಪುನರುಚ್ಚರಿಸಿದರು.
ಆರ್ಎಸ್ಎಸ್ ಬ್ಯಾನ್:
ಸರ್ಕಾರಿ ಸ್ಥಳಗಳಲ್ಲಿ RSS ಕಾರ್ಯಚಟುವಟಿಕೆ ನಿಷೇಧ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಶಾಲೆ ಮತ್ತು ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಚಟುವಟಿಕೆ ಬೇಡ ಅಂತ ಹೇಳಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅವರು ಅದರ ಬಗ್ಗೆ ಚರ್ಚೆ ಮಾಡಬಹುದು. ಮುಖ್ಯ ಕಾರ್ಯದರ್ಶಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಇಲಾಖೆಗೆ ಬಂದರೆ ಅದರ ಸಾಧಕ ಬಾಧಕ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಬ್ಬಕ್ಕನಿಗೆ ಕೈಮುಗಿಯೋದು ತಪ್ಪೇ?:
ಎಬಿವಿಪಿ ಕಾರ್ಯಕ್ರಮದಲ್ಲಿ ನಾನು ಎಲ್ಲಿ, ಯಾವಾಗ ಭಾಗಿಯಾಗಿದ್ದೆ. ರಸ್ತೆಯಲ್ಲಿ ಮೆರವಣಿಗೆ ಬರುತಿತ್ತು ಕೈಮುಗಿದೆ. ಅಬ್ಬಕ್ಕನಿಗೆ ಕೈಮುಗಿಯೋದು ತಪ್ಪೇ?. ಅದನ್ನೇ ತಪ್ಪು ಅಂದ್ರೆ ಹೇಗೆ? ಎಂದು ಪ್ರಶ್ನಿಸಿದ ಗೃಹ ಸಚಿವರು ಈ ಕುರಿತು ಅಂದೇ ಸ್ಪಷ್ಟನೆ ಕೊಟ್ಟಿದ್ದೇನೆ. ನಮಗೆ ಅನುಮತಿ ಕೇಳಿದ್ರೆ ಪೊಲೀಸರು ಕೊಡ್ತಾರೆ. ಸರ್ಕಾರಬ್ಯಾನ್ ಮಾಡಿದ್ರೆ ಕೊಡಲ್ಲ. ಇನ್ನೂ ಏನು ಬ್ಯಾನ್ ಆಗಿಲ್ಲವಲ್ಲ. ನಮ್ಮ ಇಲಾಖೆಗೆ ಅರ್ಜಿ ಕಳುಹಿಸಬೇಕು ಆಗ ನಾವು ನೋಡ್ತೇವೆ ಎಂದರು.
ಸಿಎಂ ಆಗಿದ್ದರೆ ಗ್ಯಾರಂಟಿ ಬ್ಯಾನ್ ಎಂಬ ಆರ್.ವಿ.ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಪ್ರತಿ ಜಿಲ್ಲೆಗೆ ನಾವೇ ಹೋಗ್ತೇವೆ. ಮುಖ್ಯಮಂತ್ರಿಗಳು ಜಿಲ್ಲೆಗಳಿಗೆ ಹೋಗ್ತಾರೆ.
ಸಾವಿರಾರು ಕೋಟಿ ಅಡಿಗಲ್ಲು ಹಾಕ್ತಾರೆ. ನಮ್ಮ ಜಿಲ್ಲೆಗೆ ಮೂರು ಬಾರಿ ಸಿಎಂ ಬಂದಿದ್ರು. ತುಮಕೂರು ವಿವಿಗೆ ಅಡಿಗಲ್ಲು ಹಾಕೋಕೆ ಬರ್ತಾರೆ. ಮೂರು ಸಾವಿರ ಕೋಟಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಬೇಕು. ಸರ್ಕಾರಿ ನರ್ಸಿಂಗ್ ಕಾಲೇಜಿಗೆ ಅಡಿಗಲ್ಲು ಹಾಕ್ತಾರೆ. ಇದೆಲ್ಲವೂ ಅಭಿವೃದ್ಧಿಯಲ್ವೇ. ಅಭಿವೃದ್ಧಿ ಕುಂಠಿತ ಅನ್ನೋದು ಎಲ್ಲಿಂದ ಬರುತ್ತದೆ. ಗ್ಯಾರೆಂಟಿಗಳಿಗೂ ಅನುದಾನ ಇದೆ ಎಂದು ಸಚಿವರು ಉತ್ತರಿಸಿದರು.

