ಹೊಟ್ಟೆ ಪಾಡಿನ ವೇಶ್ಯೆಯರ ನಂತರ ಅತಿಹೆಚ್ಚು ಕಾಡುವುದು ಬಾಲ ಕಾರ್ಮಿಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಜೂನ್ 12……
ಹೊಟ್ಟೆ ಪಾಡಿನ ವೇಶ್ಯೆಯರ ನಂತರ ನನ್ನನ್ನು ಅತಿಹೆಚ್ಚು ಕಾಡುವುದು ಬಾಲ ಕಾರ್ಮಿಕರು. ಪುಟ್ಟ ಮಕ್ಕಳು ಆ ಎಳೆಯ ವಯಸ್ಸಿನಲ್ಲಿ ಅತ್ಯಂತ ಕಠಿಣ ಕೆಲಸಗಳನ್ನು ಮಾಡುವುದು ಮತ್ತು ಅದೇ ಸಮಯದಲ್ಲಿ ಕೆಲವು ಶ್ರೀಮಂತರ ಮಕ್ಕಳು ಮಾಡಬಾರದ ಮೋಜು ಮಸ್ತಿ ಮಾಡುವುದನ್ನು ನೋಡಲು ಹಿಂಸೆಯಾಗುತ್ತದೆ…..
ನಾವೇ ಹುಟ್ಟಿಸಿದ ನಮ್ಮದೇ ಅತ್ಯಂತ ಮುದ್ದಾದ ಮಕ್ಕಳು ಹೊಟ್ಟೆ ಪಾಡಿಗಾಗಿ ಇನ್ನೊಬ್ಬರ ಬಳಿ ದೈನೇಸಿಯಾಗಿ ದುಡಿಯುವ ದೃಶ್ಯಗಳನ್ನು ಒಮ್ಮೆ ಸುಮ್ಮನೆ ಕಲ್ಪಿಸಿಕೊಳ್ಳಿ
, ದು:ಖದ ಕಟ್ಟೆ ಒಡೆಯುತ್ತದೆ…….

- Advertisement - 

ಅಂತಹ ಒಂದು ನೈಜ ಘಟನೆ…..
ಅದು ಮಧ್ಯಮ ವರ್ಗದವರೇ ಹೆಚ್ಚಾಗಿ ಹೋಗುವ ಆಂಧ್ರ ಶೈಲಿಯ ಊಟದ ಹೋಟೆಲ್‌. 
ಅಂದು ಶೂಟಿಂಗ್ ಕೆಲಸ ಮುಗಿಸಿ ಜೊತೆಗಾರರೊಂದಿಗೆ ರಾತ್ರಿ ೧೧ ಗಂಟೆಗೆ ಹೋಟೆಲ್ ಒಳಗೆ ಪ್ರವೇಶಿಸಿದೆ. ಮ್ಯಾನೇಜರ್ ನನಗೆ ಬಹಳ ಪರಿಚಯದವರು. ಹೋಟೆಲ್ ಮುಚ್ಚುವ ಸಮಯ ೧೦/೪೫ . ಆದರೂ ನಾನು ಒಳಗೆ ಹೋದೆ. ಕೇವಲ ಒಂದು ಕುಟುಂಬದವರು ಮಾತ್ರವೇ ಊಟ ಮುಗಿಸಿ ಬಿಲ್ ಪಾವತಿಸುತ್ತಿದ್ದರು. ಮ್ಯಾನೇಜರ್ ನಮ್ಮನ್ನು ಸ್ವಾಗತಿಸಿ

- Advertisement - 

 “ಸಾರ್, ಐಟಂ ಎಲ್ಲಾ ಖಾಲಿ, ಊಟ ಮಾತ್ರ ಇದೆ ” ಎಂದರು. ಆಯಿತು ಎಂದು ವಾಷ್ ಬೇಸಿನ್ ನಲ್ಲಿ ಕೈತೊಳೆಯಲು ಹೊರಟೆ. ಆಗ ಅಲ್ಲಿಯೇ ಕೈಯಲ್ಲಿ ಕ್ಲೀನ್ ಮಾಡುವ ಬಟ್ಟೆ ಮತ್ತು ಕಂಕುಳಲ್ಲಿ ತಟ್ಟೆ ಎತ್ತುವ ಟಬ್ ಹಿಡಿದು ನಿಂತಿದ್ದ ಸುಮಾರು ೧೨ ವರ್ಷದ ಇಬ್ಬರು ಟೇಬಲ್ ಸ್ವಚ್ಛಗೊಳಿಸುವ ಪುಟ್ಟ ಮಕ್ಕಳು ತಮಿಳಿನಲ್ಲಿ ಮಾತನಾಡಿದ್ದು ಸ್ಪಷ್ಟವಾಗಿ ಕೇಳಿಸಿತು.

ಒಬ್ಬ ಇನ್ನೊಬ್ಬನಿಗೆ “ಏಯ್ ಇನ್ನೂ ಕಸ್ಟಮರ್ ಬಂದ್ರು. ಇವರು ಮಾಮೂಲಿ ಗಿರಾಕಿ. ೧೨ ಗಂಟೆ ಕಮ್ಮಿ ಹೋಗೋದಿಲ್ಲ. ನಮ್ಮ ಗತಿ ಅಷ್ಟೇ”

- Advertisement - 

ಇನ್ನೊಬ್ಬ “ಹೂಂ ಕಣೋ, ಕಾಲು ನೋಯ್ತಾ ಇದೆ. ಹೊಟ್ಟೆ ಹಸಿತಾ ಇದೆ. ಬೆಳಗ್ಗೆ ತರಕಾರಿ ಕಟ್ ಮಾಡುವಾಗ ಕೈ ಬೆರಳಿಗೆ ಆದ ಗಾಯವೂ ಜುಂ ಅಂತಿದೆ. ಏನ್ ಮಾಡೋದು. ಮಲಗಲಿಕ್ಕೆ ೧ ಗಂಟೆ ಆಗುತ್ತೆ” ಜೊತೆಯವನು ” ಹೂಂ, ಬೆಳಗ್ಗೆ ಆ ಅಡುಗೆ ಭಟ್ಟ ಬೇರೆ ೪ ಗಂಟೆಗೆ ಎಚ್ಚರಿಸಿ ಈರುಳ್ಳಿ ಕಟ್ ಮಾಡಲು ಹೇಳುತ್ತಾನೆ. ನಮ್ಮ ಕರ್ಮ” ಎಂದು ತಲೆ ಚಚ್ಚಿಕೊಂಡ.

ಸ್ವಲ್ಪ ಗ್ಲಾಸಿನ ಮರೆಯಿಂದ ಅವರಿಬ್ಬರನ್ನು ನೋಡಿ ವಾಷ್ ಬೇಸಿನ್ ಮುಂದೆ ಕೈ ತೊಳೆಯಲು ನೀರು ಬಿಟ್ಟು ಶುಭ್ರವಾಗಿದ್ದ ನನ್ನ ಮುಂದಿನ ಕನ್ನಡಿಯಲ್ಲಿ ಮುಖ ನೋಡಿಕೊಂಡೆ.

ಒಮ್ಮೆಲೆ ಕರುಳು ಕಿವುಚಿದಂತಾಯಿತು. ಹೊಟ್ಟೆಯಲ್ಲಿ ಏನೋ ತಳಮಳ ಸಂಕಟ . ಕಣ್ಣಿನಿಂದ ನನಗರಿವಿಲ್ಲದೆ ನೀರು ಸುರಿಯತೊಡಗಿತು. ನನ್ನ ಜೊತೆಗಾರರು ಇದನ್ನು ಗಮನಿಸುವ ಮೊದಲೇ ರಪ್ಪನೆ ನಲ್ಲಿಯ ನೀರನ್ನು ಮುಖಕ್ಕೆ ಎರಚಿಕೊಂಡೆ. ಮುಖ ತೊಳೆಯುವ ನಾಟಕ ಮಾಡಿದೆ.

ಅವರು ಹೋದ ಮೇಲೆ ನಿಧಾನವಾಗಿ ಕರ್ಚೀಪಿನಿಂದ ಮುಖವರೆಸಿಕೊಳ್ಳುತ್ತಾ ಆ ಹುಡುಗರನ್ನೇ ದಿಟ್ಟಿಸುತ್ತಾ ಊಟದ ಟೇಬಲ್ ಬಳಿಗೆ ಬಂದೆ. ಆಗಲೇ ಬಾಳೆ ಎಲೆಯ ಮೇಲೆ ಅನ್ನ ಬಡಿಸಿದ್ದರು.

ನಾನು ಊಟ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅನ್ನವನ್ನು ಇನ್ನೊಬ್ಬರಿಗೆ ಕೊಟ್ಟು ” ನನಗೆ ಹೊಟ್ಟೆ ಸರಿ ಇಲ್ಲ. ನೀವು ಊಟ ಮಾಡಿ. ಮನೆಯಿಂದ ಅರ್ಜೆಂಟ್ ಪೋನ್ ಬಂದಿದೆ. ಹೋಗಬೇಕು. ನೀವು ಬೇಗ ಬೇಗ ಮುಗಿಸಿ ” ಎಂದು ಪುಸಲಾಯಿಸಿ ಒತ್ತಡದಲ್ಲಿದ್ದಂತೆ ನಟಿಸಿದೆ.

ಅವರು ಊಟ ಮಾಡುತ್ತಿರುವಾಗಲೇ ನಾನೇ ಖುದ್ದು ಬಿಲ್ ಕೇಳಿ ಪಡೆದು ಪಾವತಿಸಿದೆ. ಕೇವಲ ೧೫  ನಿಮಿಷದಲ್ಲಿ ಅವರು ಊಟ ಮುಗಿಸುವಂತೆ ಮಾಡಿ ಅವರನ್ನು ಹೊರಗೆ ಕಳುಹಿಸಿದೆ. ನಾನು ಮತ್ತೆ ವಾಷ್ ರೂಮಿಗೆ ಹೋಗುವ ನಾಟಕ ಮಾಡಿ ನಮ್ಮನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಬಹುಶಃ ಒಳಗೊಳಗೇ ಶಾಪ ಹಾಕುತ್ತಿದ್ದ ಆ ಮಕ್ಕಳಿಗೆ ೫೦೦/೫೦೦ ರೂಪಾಯಿ ನೋಟು ನೀಡಿ ಹೊರಬಂದೆ. ಕಣ್ಣ ನೀರನ್ನು ಕರ್ಚೀಪಿನಲ್ಲಿ ಹೊರೆಸಿಕೊಂಡು ಗೆಳೆಯರನ್ನು ಬೀಳ್ಕೊಟ್ಟು ಮನೆಯ ಕಡೆ ಹೆಜ್ಜೆ ಹಾಕಿದೆ…

ಇಲ್ಲಿ ನನ್ನ ಕಣ್ಣೀರು ಅಥವಾ ನಾನು ಅವರಿಗೆ ದುಡ್ಡು ಕೊಟ್ಟಿದ್ದು ಮುಖ್ಯ ಅಲ್ಲವೇ ಅಲ್ಲ. ಅದನ್ನು ಬಹಳಷ್ಟು ಜನ ಮಾಡುತ್ತಾರೆ. ಜೊತೆಗೆ ಕಾರ್ಮಿಕ ಇಲಾಖೆಗೆ ದೂರು ಕೊಟ್ಟು ಅವರನ್ನು ಕೆಲಸದಿಂದ ಮುಕ್ತಿ ಕೊಡಿಸಬಹುದು ಅಥವಾ ಹೋಟೆಲ್ ಮಾಲೀಕರಿಗೆ ಹೇಳಿ ಅವರನ್ನು ಕೆಲಸದಿಂದ ತೆಗೆದುಹಾಕಬಹುದು. ಇದು ವೈಯಕ್ತಿಕ ನೆಲೆಯಲ್ಲಿ ಮಾಡಲು ಸಾಧ್ಯವಿರುವ ಕೆಲಸ. ಮುಂದೆ ಆ ಮಕ್ಕಳ ಬದುಕು !!!!!??

ಆದರೆ ಈ ವ್ಯವಸ್ಥೆ ಏಕೆ ಹೀಗೆ ಕೆಲವರಿಗೆ ಅತ್ಯಂತ ಕಠೋರವಾಗಿರುತ್ತದೆ. ಮುಂದುವರಿದ ದೇಶಗಳಲ್ಲಿ ಬಹುತೇಕ ಎಲ್ಲಾ ವರ್ಗದ ಕೆಲಸಗಾರರಿಗು ೮ ಗಂಟೆಗಳು ಮಾತ್ರ ಕೆಲಸ ಇರುತ್ತದೆ. ನಂತರ ವಿಶ್ರಾಂತಿ ಕಡ್ಡಾಯ. ಎಲ್ಲಾ ವೃತ್ತಿಗಳಿಗೂ ಸಮ ಪ್ರಮಾಣದ ಗೌರವ. ಬಾಲ ಕಾರ್ಮಿಕ ಪದ್ದತಿಯಂತು ತುಂಬಾ ಕಡಿಮೆ.

ನಮ್ಮಲ್ಲಿ ಈ ಅಮಾನವೀಯ ಪದ್ದತಿ ಇನ್ನೂ ಮುಂದುವರಿದಿರುವುದು ಅತ್ಯಂತ ಶೋಚನೀಯ. ಇದನ್ನು ನಿಯಂತ್ರಿಸಲು ಒಬ್ಬ ಮಂತ್ರಿ, ಅಧಿಕಾರಿಗಳು, ಇಲಾಖೆ, ವಿವಿಧ ಸಂಪನ್ಮೂಲಗಳು ಎಲ್ಲಾ ಇವೆ. ಆದರೂ ಈಗಲೂ ದೇಶದ ಎಲ್ಲಾ ಕಡೆ ಈ ಪದ್ದತಿ ಜಾರಿಯಲ್ಲಿದೆ. ಬೆಕ್ಕಿನಂತೆ ನಾವು ಕೂಡ ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತಿದ್ದೇವೆಯೇ ? ಛೆ………..

ನಮ್ಮ ಮಕ್ಕಳೇ ಆ ಪರಿಸ್ಥಿತಿಯಲ್ಲಿ ಇದ್ದರೆ ಹೇಗಿರುತ್ತಿತ್ತು ಒಮ್ಮೆ ಊಹಿಸಿಕೊಳ್ಳಿ. ಇದನ್ನು ಇಲ್ಲಿ ಹೇಳಲು ಕಾರಣ ವ್ಯವಸ್ಥೆಯ ಸಂಪೂರ್ಣ ಸುಧಾರಣೆಗಾಗಿ ನಾವು ಸಹ ಒಂದಷ್ಟು ಪ್ರಯತ್ನ ಮಾಡುವ ಅವಶ್ಯಕತೆ ಇದೆ. ಅದು ಕೇವಲ ಬಾಲ ಕಾರ್ಮಿಕ ವ್ಯವಸ್ಥೆ ಮಾತ್ರವಲ್ಲ. ಸಮಗ್ರ ಪರಿವರ್ತನೆಗೆ ನಮ್ಮ ನಮ್ಮ ನೆಲೆಯಲ್ಲಿ ನಮ್ಮ ಕೈಲಾದಷ್ಟು ಪ್ರಯತ್ನಿಸೋಣ. ಮುಂದೆ ಬದಲಾವಣೆ ಖಂಡಿತ ಸಾಧ್ಯ. ಆ ದಿನಗಳ ನಿರೀಕ್ಷೆಯಲ್ಲಿ……..
ಲೇಖನ:ವಿವೇಕಾನಂದ. ಎಚ್. ಕೆ. 9663750451

 

Share This Article
error: Content is protected !!
";