ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ್ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಯೋಜನೆ-2024ರ ಅಡಿಯಲ್ಲಿ ರಚಿಸಲಾದ ಮಕ್ಕಳ ಕಾನೂನು ಸೇವೆಗಳ ಘಟಕದ ಸದಸ್ಯರಾಗಿ ಹಮ್ಮಿಕೊಂಡಿದ್ದ ಓರಿಯಂಟೇಷನ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ರೀತಿಯಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಅಡಿಯಲ್ಲಿ ಮಕ್ಕಳ ಕಾನೂನು ಸೇವೆಗಳ ಘಟಕಕ್ಕೆ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ, ಸಖಿ, ಪ್ಯಾನಲ್ ವಕೀಲರು, ಅರೆಕಾಲಿಕ ಸ್ವಯಂ ಸೇವಕರು ಸೇರಿದಂತೆ ಕ್ಷೇತ್ರಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುವವರಿಗೆ ಕೆಲವು ಜವಾಬ್ದಾರಿಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು ತಿಳಿಸಿದ ಅವರು, ಯಾವೊಂದು ಮಗುವೂ ಸಹ ತನ್ನ ಹಕ್ಕಿನಿಂದ ವಂಚಿತವಾಗಬಾರದು ಎಂದು ಹೇಳಿದರು.
ಮಕ್ಕಳ ಕಾನೂನು ಸೇವೆಗಳ ಘಟಕವು ನ್ಯಾಯಾಲಯ ಹಾಗೂ ನ್ಯಾಯಾಲಯದ ಹೊರಗಡೆ ಸೇರಿದಂತೆ ಎಲ್ಲ ಹಂತದಲ್ಲಿಯೂ ಮಕ್ಕಳಿಗೆ ಕಾನೂನು ಸೇವೆ ನೀಡುವ ಉದ್ದೇಶದಿಂದ ಸುಪ್ರಿಂಕೋರ್ಟ್ ಮಕ್ಕಳ ಕಾನೂನು ಸೇವೆಗಳ ಘಟಕ ಸ್ಥಾಪನೆ ಮಾಡಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ನಾಡಿಗ ಜಯಸ್ವಾಮಿ ಉಪನ್ಯಾಸ ನೀಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಉಚಿತವಾಗಿ ಅರ್ಹರಿಗೆ ಕಾನೂನಿನ ನೆರವು ನೀಡಲಾಗುತ್ತಿದೆ. ಸುಮಾರು 7 ರಿಂದ 8 ಕಾನೂನುಗಳು ಮಕ್ಕಳ ಪರ ಇದ್ದು, ಮಕ್ಕಳ ಕಾನೂನುಗಳ ಬಗ್ಗೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯುವ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸಬೇಕು ಎಂದು ಹೇಳಿದರು.
ಮಕ್ಕಳ ಪರವಾಗಿರುವ ಕಾನೂನುಗಳು ಉಲ್ಲಂಘನೆಯಾದ ಸಂದರ್ಭಗಳಲ್ಲಿ ಮಕ್ಕಳ ಕಾನೂನು ಸೇವೆಗಳ ಘಟಕದ ಸದಸ್ಯರು ಭಾಗವಹಿಸಿ, ಯಾವ ಕಾನೂನು ಅಡಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದನ್ನು ಗಮನಿಸಿ, ಕಾನೂನಿನ ನೆರವು ನೀಡಿ ಸರಿಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸೇರಿದಂತೆ ಮಕ್ಕಳ ಕಾನೂನು ಸೇವೆಗಳ ಘಟಕದ ಸದಸ್ಯರು ಇದ್ದರು.