ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಪ್ರಕರಣಗಳನ್ನು ತಡೆಯಲು ಕಾನೂನಿನ ಅರಿವಿನೊಂದಿಗೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ರವಿಕುಮಾರ್‌ತಿಳಿಸಿದರು.
ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ನಂತರದ ಬಾಲಕಿಯರ ವಿದ್ಯಾಥಿನಿಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ದೊಡ್ಡಬಳ್ಳಾಪುರ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಿ ನಡೆದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುಷ್ಠಾನದ ಜೊತೆಗೆ ರಾಜ್ಯ ಸರ್ಕಾರದ ನಿರ್ದಿಷ್ಟ ಯೋಜನೆಗಳು ಹೆಣ್ಣು ಮಕ್ಕಳ ಸಮಗ್ರ ಪ್ರಗತಿಗೆ ಪೂರಕವಾಗಿವೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಶ್ರೀ ದೇವರಾಜ ಅರಸ್‌ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ಹೆಣ್ಣು ಮಕ್ಕಳ ಸಬಲೀಕರಣವನ್ನು ಪ್ರಧಾನ ಆದ್ಯತೆಯಾಗಿಟ್ಟುಕೊಂಡು ಅನೇಕ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿವೆ.
ಲಿಂಗ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸಾಮಾಜಿಕ ಸಮಾನತೆಯನ್ನು ಸಾಧಿಸುವುದು ಅಗತ್ಯವಾಗಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ನಿಯಂತ್ರಿಸುವುದು ಅತ್ಯಗತ್ಯ. ಎಲ್ಲ ವಲಯಗಳಲ್ಲಿ ಲಿಂಗ ಸಮಾನತೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಜ್ಞಾವಂತ ಹೆಣ್ಣು ಮಕ್ಕಳ ಹೊಣೆಗಾರಿಕೆಯೂ ಮುಖ್ಯ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಗಣನೀಯವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಪ್ರಮಾಣ ಹೆಚ್ಚಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯೂ ಒಂದಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಿ, ಸಾಮಾಜಿಕ ಭದ್ರತೆಯನ್ನು ಒದಗಿಸುವ ಮತ್ತು ಸುರಕ್ಷತೆಯನ್ನು ಖಾತರಿ ಪಡಿಸುವುದು ಅಗತ್ಯ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ ಅವರಿಗೆ ಸುರಕ್ಷಿತ ಬದುಕಿನ ಭರವಸೆಯನ್ನು ಮೂಡಿಸಬೇಕು ಎಂದು ವಿವರಿಸಿದರು.
ಭವಿಷ್ಯದೆಡೆಗೆ ಹೆಣ್ಣು ಮಕ್ಕಳ ದೃಷ್ಠಿ ಎಂಬುದು ಈ ಬಾರಿಯ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಧ್ಯೇಯವಾಗಿದ್ದು, ಭರವಸೆಯ ನಾಳೆಗಳ ಖಾತರಿಯ ಕುರಿತು ಜಾಗೃತಿ ಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ದಿ ಉಪ ಯೋಜನಾಧಿಕಾರಿ ಅರುಣ್‌ಕುಮಾರ್, ಹಾಸ್ಟೆಲ್‌ವಾರ್ಡನ್‌ರಾಧಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಿಬ್ಬಂದಿ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.