ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆಟದ ಮೈದಾನದಲ್ಲಿ ಮಕ್ಕಳು ಹೆಚ್ಚು ಸಮಯ ಕಳೆಯುವಂತೆ ಪ್ರೋತ್ಸಾಹಿಸುವ ಜವಾಬ್ದಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಸಜ್ಜಾತ್ ತಿಳಿಸಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ, ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಹಯೋಗದೊಂದಿಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಹಾಕಿ ಪಂದ್ಯಾವಳಿ ಮತ್ತು ಆಯ್ಕೆ ಉದ್ಗಾಟಿಸಿ ಮಾತನಾಡಿದರು.
ಕ್ರೀಡೆ ಮಾನಸಿಕ ದೈಹಿಕ ಆರೋಗ್ಯ ವೃದ್ದಿಸಿ ನಾಯಕತ್ವ ಗುಣ ಬೆಳೆಸುತ್ತದೆ. ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ವಿಕಸನ, ಏಕಾಗ್ರತೆ, ಜವಾಬ್ದಾರಿ, ಉತ್ತಮ ಕೌಶಲ್ಯ ಸಂವಹನ ಕೂಡ ಕ್ರೀಡೆಯಿಂದ ಸಿಗುತ್ತದೆ. ಒತ್ತಡ, ಆತಂಕ ನಿವಾರಿಸಿ ಪ್ರೀತಿ, ವಿಶ್ವಾಸ, ಸಹಕಾರ, ಮೂಡಿಸುತ್ತದೆ ಎಂದು ಹೇಳಿದರು.
ಕ್ರೀಡೆಯಿಂದ ಮೆದುಳಿಗೆ ಹರಿಯುವ ರಕ್ತ ಹೆಚ್ಚಳವಾಗಿ ಜ್ಞಾನಪಕಶಕ್ತಿ ವೃದ್ದಿಯಾಗುತ್ತದೆ. ಹಾಕಿಗೆ ಪ್ರಪಂಚದಲ್ಲಿಯೇ ವಿಶಿಷ್ಟವಾದ ಸ್ಥಾನವಿದೆ. ಹಾಕಿ ಬಿಟ್ಟರೆ ಯಾವ ಕ್ರೀಡೆಯಲ್ಲಿಯೂ ನಮ್ಮ ದೇಶಕ್ಕೆ ಹೆಚ್ಚಿನ ಚಿನ್ನದ ಪದಕಗಳು ಸಿಕ್ಕಿಲ್ಲ. ಆರೋಗ್ಯಕರ ಯುವ ಪೀಳಿಗೆಯನ್ನು ಸೃಷ್ಟಿಸಲು ಕ್ರೀಡೆ ಅತ್ಯಂತ ಸಹಕಾರಿ. ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಯಾರೂ ಪ್ರಶ್ನಿಸದ ರೀತಿಯಲ್ಲಿ ತೀರ್ಪುಗಾರರು ಪಾರದರ್ಶಕವಾಗಿ ತೀರ್ಪು ನೀಡುವಂತೆ ಸೂಚಿಸಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ ರಾಷ್ಟ್ರೀಯತೆ ಎಂದರೆ ಭಾವೈಕ್ಯತೆ, ಸೌಹಾರ್ಧತೆಯ ಸಂಕೇತ. ಸಾಮಾಜಿಕ ಜಾಲತಾಣಗಳು ಮನುಷ್ಯನ ಸಂಬಂಧಗಳನ್ನು ಹಾಳು ಮಾಡುತ್ತಿವೆ. ಸ್ವಾರ್ಥ, ದ್ವೇಷ, ಅಸೂಯೆ ತೊಲಗಿ ಮಾನವೀಯತೆ ಉಳಿಯಬೇಕೆಂದರೆ ಕ್ರೀಡೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಕ್ರೀಡೆಯಿಂದ ಸಾಧನೆ, ಯಶಸ್ಸು ನಿಮ್ಮ ಜೊತೆಯಲ್ಲಿರುತ್ತದೆ. ಓದಿನ ಜೊತೆ ಕ್ರೀಡೆಯನ್ನು ಜೊತೆ ಜೊತೆಯಾಗಿಟ್ಟುಕೊಳ್ಳಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಚ್.ತಿಪ್ಪೇಸ್ವಾಮಿ ಮಾತನಾಡುತ್ತ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ನಾಲ್ಕು ನೂರು ಗೋಲ್‌ಗಳನ್ನು ಹೊಡೆದಿದ್ದಾರೆ. ಹಾಕಿ ಎನ್ನುವುದು ಚಾಕಚಕ್ಯತೆಯ ಆಟ. ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಕ್ರೀಡಾ ನೀತಿ ರೂಪಿಸಿ ಕ್ರೀಡಾ ಪಟುಗಳಿಗೆ ವಿಮೆ ಮಾಡಿಸಲು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸುತ್ತೇವೆ. ಕ್ರೀಡೆ ದೊಡ್ಡದಾಗಿ ಬೆಳೆಯಬೇಕು. ಕ್ರೀಡೆಗೆ ಯಾವುದೇ ಜಾತಿಯಿಲ್ಲ. ಹೊಂದಾಣಿಕೆ, ಸಹಕಾರ ಮನೋಭಾವ, ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಜೆ.ಸಾಧಿಕ್, ಐ.ಕ್ಯೂ.ಎ.ಸಿ. ಸಂಚಾಲಕಿ ಪ್ರೊ.ತಾರಿಣಿ ಶುಭದಾಯಿನಿ. ಸರ್ಕಾರಿ ಕಲಾ ಕಾಲೇಜು ಅಧೀಕ್ಷಕ ಹರೀಶ್‌ರೆಡ್ಡಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಸನ್ನಕುಮಾರ್ ಡಿ.ಆರ್. ಸದಾಶಿವಪ್ಪ, ಮುಜಿಬುಲ್ಲಾ, ಶಿವಶಂಕರ್, ಡಾ.ರೇಖಾ, ಗಂಗಾಧರ, ಡಾ.ರಾಘವೇಂದ್ರ, ಡಾ.ಹರೀಶ್, ಪ್ರೊ.ಜಗನ್ನಾಥ ಪ್ರೊ.ಶಿವಪ್ರಸಾದ, ಡಾ.ಹನುಮಂತಪ್ಪ ಇವರುಗಳು ವೇದಿಕೆಯಲ್ಲಿದ್ದರು.

