ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎದೆ ಹಾಲು ಕುಡಿದು ಬೆಳೆದ ಮಕ್ಕಳಿಗೆ ಸಕ್ಕರೆ ಕಾಯಿಲೆ, ರಕ್ತನಾಳ ಗಡುಸಾಗುವಿಕೆ ಮುಂತಾದ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳಿಂದ ಸಾಬೀತಾಗಿದ್ದು ಬಾಣಂತಿಯರು ಕಡ್ಡಾಯವಾಗಿ ಮಕ್ಕಳಿಗೆ ಕನಿಷ್ಠ ಎರಡು ವರ್ಷಗಳ ತನಕ ಎದೆ ಹಾಲು ಉಣಿಸುವಂತೆ ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಮನವಿ ಮಾಡಿದರು.
ಇಲ್ಲಿನ ಯುಎಚ್ ಪಿಸಿ ವತಿಯಿಂದ ನೆಹರು ನಗರ ಮೂರನೇ ಕ್ರಾಸ್ ನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸ್ತನಪಾನ ಮಾಡಿಸುವುದರಿಂದ ಮಗುವಿಗಷ್ಟೇ ಅಲ್ಲ, ತಾಯಿಗೂ ವರದಾನ. ಆದ್ದರಿಂದ ತಾಯಿ ಅನವಶ್ಯವಾಗಿ ಅನ್ಯರ ಮಾತುಗಳಿಗೆ ಕಿವಿಗೊಡದೆ ಕಡ್ಡಾಯವಾಗಿ ಶಶಿಗಳಿಗೆ ಹಾಲುಣಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳಿಗೆ ಎದೆ ಹಾಲು ಊಣಿಸುವುದರ ಬಗ್ಗೆ ಮಹಿಳೆಯರಲ್ಲಿ ತಪ್ಪು ಕಲ್ಪನೆ ಇದೆ.
ತಮ್ಮ ದೈಹಿಕ ಸೌಂದರ್ಯ ಹಾಳಾಗುತ್ತದೆಂಬ ತಪ್ಪು ನಂಬಿಕೆಯಿಂದ ಮಗುವನ್ನು ತಾಯಿ ಹಾಲಿನಿಂದ ವಂಚಿಸುತ್ತಿದ್ದಾರೆ. ಆದರೆ ಎದೆ ಹಾಲು ಮಗುವಿಗೆ ಅವಶ್ಯವಿರುವ ಎಲ್ಲ ಪೌಷ್ಟಿಕಾಂಶಗಳನ್ನೊಳಗೊಂಡ, ಯಾವುದೇ ಕಲ್ಮಶವಿರದ ನೈಸರ್ಗಿಕ ಆಹಾರ. ತಾಯಿ ಎದೆ ಹಾಲು ಮಗು ಜನಿಸಿದ ನಂತರ ಎದುರಾಗುವ ಅನೇಕ ರೋಗ-ರುಜಿನಗಳನ್ನು ಶಮನವಾತ್ತದೆ ಎಂದರು.
ಎ, ಸಿ, ಡಿ, ಜೀವಸತ್ವಗಳು ಮಗುವನ್ನು ಇರುಳುಗಣ್ಣು, ರಿಕೆಟ್ಸ್‌ನಂಥ ಅನೇಕ ಭೀಕರ ರೋಗಗಳಿಂದ ದೂರವಿಡುತ್ತದೆ. ಈ ಎದೆಹಾಲು ಮಗುವಿನ ಆರೋಗ್ಯ ವರ್ಧಸಿ ಜತೆ-ಜತೆಗೇ ತಾಯಿ ಮಗುವಿನ ಆತ್ಮಿಯತೆ, ಪ್ರೀತಿಯೂ ಪರಸ್ಪರ ಜಾಸ್ತಿಯಾಗುತ್ತದೆ. ಮಗು ಬೆಳೆದಂತೆ ಅದರ ಆಹಾರ ಸೇವನೆ ಪ್ರಮಾಣವೂ ಹೆಚ್ಚುತ್ತದೆ. ಸಾಕಷ್ಟು ಪ್ರಮಾಣದಲ್ಲಿ ದಿನಪೂರ್ತಿ ಹಾಲು ಲಭ್ಯವಿರುತ್ತದೆ. ಎದೆ ಹಾಲು ಮಗುವಿನ ಮಿದುಳು ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯ ಎಂದು ಸಣ್ಣ ರಂಗಮ್ಮ ಹೇಳಿದರು.
ಇದೇ ಸಂದರ್ಭದಲ್ಲಿ ಪೌಷ್ಟಿಕ ಆಹಾರ, ವಿಶ್ವ ಜನಸಂಖ್ಯೆ ಹೆಚ್ಚಳ, ಬಾಲ್ಯ ವಿವಾಹ ತಡೆಗಟ್ಟುವಕೆ ಕುರಿತು ಜಾಗೃತಿ ಮೂಡಿಸಿದರು.
ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಮಂಜುಳಾ, ನೆಹರು ನಗರದ ಆರೋಗ್ಯ ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಬಾಣಂತಿಯರಿಗೆ ಹೆಚ್ಚಿನ ಮಾಹಿತಿ ನೀಡಿದರು.