ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಮಸ್ಕಾರ.. ಎಲ್ಲರೂ ಸಾಲಗಿ ಬನ್ನಿ, ಎಲ್ಲರಿಗೂ ಚಿಕಿತ್ಸೆ ನೀಡುವೆ, ನಿಮ್ಮ ಮಗು ಚೆನ್ನಾಗಿದ್ದೀಯಾ ನಿಮ್ಮ ತಂದೆ-ತಾಯಿಗಳು ಚೆನ್ನಾಗಿದ್ದಾರಾ ಎನ್ನುತ್ತಲೆ ಎಲ್ಲಾರ ಪ್ರೀತಿ ವಿಶ್ವಾಸಗಳಿದ್ದ ವೈದ್ಯ ಇಂದು ಮರೆಯಾಗಿದ್ದಾರೆ. ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಜಿ.ಆರ್ ತಿಮ್ಮೆಗೌಡ ರವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ತಿಮ್ಮೇಗೌಡ ಅವರ ಹೆಸರೇ ಎಲ್ಲರಿಗೂ ಚಿರಪರಿಚಿತವಾಗಿತ್ತು. ಸಣ್ಣ ಮಗುವಿನ ಬಾಯಲ್ಲೂ ಕೂಡ ಗೌಡ್ರು ಆಸ್ಪತ್ರೆಗೆ ಬಂದಿದ್ದಾರ? ಎನ್ನುವಷ್ಟು ಮಟ್ಟಿಗೆ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದ ವೈದ್ಯ ಅಪಘಾತಕ್ಕೆ ಕೀಡಾಗಿದ್ದಾರೆ ಎನ್ನುವ ಸಾವಿನ ವಿಚಾರ ಸಿರಿಗೆರೆ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರಿಗೆ ತಿಳಿದ ಕೂಡಲೆ ಎಲ್ಲರ ಕಣ್ಣುಗಳು ಒದ್ದೆಯಾಗಿದ್ದವು.
ಮಕ್ಕಳ ತಜ್ಞ ಡಾ. ತಿಮ್ಮೇಗೌಡ(34) ಅವರು ಕಾರ್ಯನಿಮಿತ ದಾವಣಗೆರೆಗೆ ತೆರಳಿ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಚಿತ್ರದುರ್ಗದ ಕಡೆಗೆ ವಾಪಸ್ ಬರುವಂತಹ ಸಂದರ್ಭದಲ್ಲಿ ದಾವಣಗೆರೆ ತಾಲೂಕಿನ ಆನುಗೋಡು ಗ್ರಾಮದ ಬಳಿ ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಿರಿಗೆರೆ ಸುತ್ತಮುತ್ತಲಿನ ಭಾಗದ ಹಳ್ಳಿಗಳಾದ ಆಲಘಟ್ಟ, ಓಬವ್ವನಾಗತಿಹಳ್ಳಿ, ಸೀಗೆಹಳ್ಳಿ, ಸಿದ್ದಾಪುರ, ಮೆದಿಕೆಪುರ, ಚಿಕ್ಕೇನಳ್ಳಿ, ಚಿಕ್ಕಲಘಟ್ಟ, ಸಿರಿಗೆರೆ ಸರ್ಕಲ್, ಚಿಕ್ಕಬೆನ್ನೂರು, ಭರಮಸಾಗರ, ಹಳುವುದರ, ಹಂಪನೂರು, ಕಾಗಲಕೆರೆ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಡಾ. ತಿಮ್ಮೇಗೌಡರ ಬಳಿ ಚಿಕಿತ್ಸೆ ಪಡೆದುಕೊಳ್ಳಲು ಹುಡುಕಿಕೊಂಡು ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ಬರುತ್ತಿದ್ದರು.
ಸಿರಿಗೆರೆ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಯಾರೊಬ್ಬರೊಬ್ಬರ ಬಳಿಯೂ ಜಗಳ ಮಾಡಿಕೊಳ್ಳದೆ ಯಾರ ಬಳಿಯೂ ಸಹ ಹಣ ಸ್ವೀಕರಿಸದೆ ಚಿಕಿತ್ಸೆ ನೀಡುತ್ತಿದ್ದರು.
ಮೂಲತಃ ಮಕ್ಕಳ ತಜ್ಞರಾಗಿದ್ದ ಡಾ. ತಿಮ್ಮೇಗೌಡ ಅವರು ಮಕ್ಕಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಸಿರಿಗೆರೆ ಆಸ್ಪತ್ರೆ ಮಕ್ಕಳ ಆಸ್ಪತ್ರೆಯಾಗಿ ಬದಲಾವಣೆ ಗೊಂಡಿತ್ತು. ಅಷ್ಟರಮಟ್ಟಿಗೆ ಪ್ರತಿನಿತ್ಯ ನೂರಾರು ಮಕ್ಕಳನ್ನ ಪೋಷಕರು ಕರೆದುಕೊಂಡು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವೈದ್ಯರ ಕೈಗುಣ ಚೆನ್ನಾಗಿದೆ. ಅವರ ಬಳಿ ನಮ್ಮ ಮಕ್ಕಳನ್ನು ತೋರಿಸಿದರೆ ಗುಣಮುಖರಾಗುತ್ತಾರೆ ಎನ್ನುವ ಮಾತು ಸಿರಿಗೆರೆ ಸುತ್ತ ಮುತ್ತಲಿನ ಜನ ಬಾಯಲ್ಲಿ ಹರಿದಾಡುತ್ತಿತ್ತು. ಅಷ್ಟರಮಟ್ಟಿಗೆ ಮಕ್ಕಳ ಬಗ್ಗೆ ಸುರಕ್ಷತ ಕ್ರಮಗಳನ್ನು ವಹಿಸಿ ಚಿಕಿತ್ಸೆ ನೀಡುತ್ತಿದ್ದರು.
ಸಿರಿಗೆರೆಯಲ್ಲಿ ತರಳಬಾಳು ಮಠದ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಅಚ್ಚುಮೆಚ್ಚಿನ ವೈದ್ಯರಾಗಿದ್ದರು. ರಾತ್ರಿ ವೇಳೆ ಎಷ್ಟು ಹೊತ್ತಿಗೆ ಆದರೂ ಕೂಡ ಫೋನ್ ಮಾಡಿದರು ಸಹ ಫೋನ್ ರಿಸೀವ್ ಮಾಡಿ ಕಂಡಿಷನ್ ಹೇಗಿದೆ ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು ಎನ್ನುವಷ್ಟು ಮಾಹಿತಿಯನ್ನ ಕ್ಷಣಮಾತ್ರದಲ್ಲಿ ತಿಳಿಸುತ್ತಿದ್ದರು. ಆದರೆ ಅವರು ಮಾಡಿದ ಸೇವೆ ಸಿರಿಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ತಾಯಿ ಇಲ್ಲದ ತಬ್ಬಲಿಯಂತೆ ಆಗಿದೆ.
ತಿಮ್ಮೇಗೌಡರು ಮಗಳಿಗೆ ಈಗ ಎರಡು ವರ್ಷ-
ಚಿಕ್ಕ ವಯಸ್ಸಿನಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳ ಬಳಗವನ್ನೇ ಕಟ್ಟಿಕೊಂಡಿದ್ದಾರೆ. ಬಡವರು ಅಂದರೆ ಸಾಕು ಅವರಿಗೆ ಮರುಳಾಗುತ್ತಿದ್ದರು. ಕೈಲಾದಷ್ಟು ಸಹಾಯ ಮಾಡುತ್ತಿದ್ದ ವೈದ್ಯ ಇಲ್ಲದಂತಾಗಿದ್ದಾರೆ. ವೈದ್ಯ ಡಾ.ಜಿ.ಆರ್ ತಿಮ್ಮೇಗೌಡ ಅವರು ಮೂಲತಃ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ನಿವಾಸಿ. ಇವರ ತಂದೆ ನಿವೃತ್ತ ಶಿಕ್ಷಕರು. ಚಿಕ್ಕ ಕುಟುಂಬ ಆದರು ಸಹ ಎಲ್ಲರೊಡನೆ ಪ್ರೀತಿಗೆ ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದರು. ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2021 ರಲ್ಲಿ ಕಾರ್ಯ ಆರಂಭಿಸಿ ಎಲ್ಲರ ಮನಸಲ್ಲಿ ಅಚ್ಚ ಹಸಿರಾಗಿ ಉಳಿದಿದ್ದಾರೆ. 34 ವರ್ಷದ ವೈದ್ಯರ ತಿಮ್ಮೇಗೌಡ ಅವರು ಎರಡು ವರ್ಷದ ಮಗಳು, ಪತ್ನಿ, ಅಪಾರ ಬಂಧು ಮಿತ್ರರನ್ನ ಬಿಟ್ಟು ಅಗಲಿರುವುದು ಬೇಸರದ ವಿಚಾರವಾಗಿದೆ.
ಸಹಾಯ ಮಾಡುವುದರಲ್ಲಿ ಒಂದು ಕೈ ಮುಂದೆ- ಮಕ್ಕಳ ತಜ್ಞ ಆಗಿದ್ದರು ಸಹ ಡಾ.ತಿಮ್ಮೇಗೌಡ ಅವರು ಗ್ರಾಮೀಣದ ಜನರಿಗೆ ಎಲ್ಲ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆಸ್ಪತ್ರೆಗೆ ಹೋಗಲು ಹಣವಿಲ್ಲ ಎಂದಾಗ ಎಷ್ಟೋ ರೋಗಿಗಳಿಗೆ ಹಣದ ಸಹಾಯ ಮಾಡಿ ಮಾನವೀಯತೆ ಮರೆದಿದ್ದಾರೆ.
ಸ್ನೇಹಿತರ ವೈದ್ಯರ ಸಂಪರ್ಕ ತೆಗೆದುಕೊಂಡು ಸಾಕಷ್ಟು ರೋಗಿಗಳಿಗೆ ಉಚಿತ ಸೇವೆ ಒದಗಿಸಿದ್ದಾರೆ ಅಷ್ಟೇ ಅಲ್ಲದೆ ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ತನ್ನ ಸ್ವಂತ ಮನೆಯ ಸದಸ್ಯರಂತೆ ರೋಗಿಗಳನ್ನ ಆರೈಕೆ ಮಾಡಿದ್ದಾರೆ.