ಚಂದ್ರವಳ್ಳಿ ನ್ಯೂಸ್, ಭರಮಸಾಗರ:
ಚಿತ್ರದುರ್ಗ : ವಿದ್ಯಾರ್ಥಿಗಳು ಪುಸ್ತಕ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಳ್ಳಬೇಕು. ಸಾಹಿತ್ಯ ಮತ್ತು ಶಿಕ್ಷಣ ಮಕ್ಕಳ ಉಜ್ವಲ ಬದುಕಿನ ಬುನಾದಿ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಸಾಹಿತ್ಯ ರಚನೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ಭರಮಸಾಗರದಲ್ಲಿ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಡಿ.ವಿ.ಎಸ್ ಸಮೂಹ ಸಂಸ್ಥೆಗಳು ಇವರ ಸಹಯೋಗದಲ್ಲಿ ಶನಿವಾರದಂದು ಆಯೋಜಿಸಲಾಗಿದ್ದ “ಮಕ್ಕಳ ಸಾಹಿತ್ಯ – ಒಂದು ಅವಲೋಕನ” ಹಾಗು ಮಕ್ಕಳ ಸ್ವರಚಿತ ಕವನ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ, ಮಕ್ಕಳ ಪ್ರಪಂಚ ಬಹಳ ವಿಶಿಷ್ಟವಾದುದಾಗಿದ್ದು ಅವರ ಭಾವನೆಗಳನ್ನು ಸಮಾಜ ಅರಿತುಕೊಳ್ಳಬೇಕಿದೆ. ಪಶ್ಚಿಮ ಬಂಗಾಳದ ಬಾಬರ್ ಅಲಿ ತನ್ನ 16 ನೇ ವಯಸ್ಸಿನಲ್ಲಿ ಪ್ರಪಂಚದ ಅತಿ ಕಿರಿಯ ಹೆಡ್ ಮಾಸ್ಟರ್ ಎಂಬ ಖ್ಯಾತಿ ಪಡೆದಿರುವುದು ಮತ್ತು ಜರ್ಮನಿಯ ಜೂಲಿಯನ್ ಕಾಪ್ಕೆ 17 ವರ್ಷದ ಬಾಲಕಿಯಾಗಿದ್ದಾಗ ಏರೋಪ್ಲೇನ್ ಅಪಘಾತದ ಪರಿಣಾಮದಿಂದ ಅಮೆಜಾನ್ ಕಾಡಿನಲ್ಲಿ ಬಿದ್ದು ಬದುಕಿ ಸುಮಾರು 10 ದಿನಗಳ ಕಾಲ ತನ್ನ ಜೀವ ಉಳಿಸಿಕೊಂಡು ‘ಮಿರಾಕಲ್ಸ್ ಸ್ಟಿಲ್ ಹ್ಯಾಪನ್’ ಎಂಬ ಪುಸ್ತಕ ರಚಿಸಿರುವುದು ಮಕ್ಕಳ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಮಕ್ಕಳು ಅನೇಕ ಸಾಹಿತ್ಯ ಕೃತಿಗಳನ್ನು ಓದುವುದರ ಮೂಲಕ ತಮ್ಮ ಅಂತಃಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದ ಯೋಗೀಶ್ ಸಹ್ಯಾದ್ರಿ, ಹಿರಿಯ ಮಕ್ಕಳ ಸಾಹಿತಿಗಳಾದ ಪಂಜೆ ಮಂಗೇಶರಾಯರು, ಜಿ.ಪಿ. ರಾಜರತ್ನಂ ಅವರಂತಹ ಅನೇಕ ಕವಿಗಳ ಕುರಿತು ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಹಿರಿಯೂರು ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಸ್. ಮಾರುತಿ ಅವರು, ಮಕ್ಕಳಿಗೆ ಸಾಹಿತ್ಯದ ಸಕ್ಯ ದೊರೆತರೆ ಅದು ಪ್ರಜಾಪ್ರಭುತದ ಬೇರುಗಳಿಗೆ ನೀರು ಎರೆದಂತೆ. ಕಾರಣ ಸಿದ್ಧಾಂತವಿಲ್ಲದ ಪ್ರಭುತ್ವ, ಲಜ್ಜೆಯಿಲ್ಲದ ಭ್ರಷ್ಟತೆ, ಪಾಪವಿಲ್ಲದ ಜಾತಿಯತೆ ರಾಷ್ಟ್ರವನ್ನು ವಿನಾಶದತ್ತ ಕೊಂಡುಯುತ್ತವೆ. ಸಾಹಿತ್ಯದಿಂದ ಸಂಸ್ಕಾರಗೊಂಡ ಮತಿ-ಮನಸುಗಳು ಇಂತಹ ಪ್ರಕ್ರಿಯೆಯನ್ನು ಪ್ರಶ್ನಿಸುತ್ತದೆ. ಹಾಗಾದಾಗಲೆ ಪ್ರಜಾಪ್ರಭುತ್ವದ ಬೇರುಗಳು ಹರಡಲು ಸಾಧ್ಯ. ಸಾಹಿತ್ಯ ಮಕ್ಕಳ ಮನಸ್ಸನ್ನು ನೈತಿಕವಾಗಿಸುತ್ತದೆ. ಇಂದು ಮಕ್ಕಳ ಮನಸ್ಸನ್ನು ಮತ್ತು ಮತಿಯನ್ನು ಈ ನೈತಿಕವಾಗಿಸುವ ಕ್ರಿಯೆಯಲ್ಲಿ ತೊಡಗಿಸಬೇಕಿದೆ. ಮಕ್ಕಳ ಮನಸ್ಸನ್ನು ಅರಳಿಸುವ ಸಾಹಿತ್ಯದ ಅಗತ್ಯವಿದೆ ಎಂದು ಡಾ. ಎಸ್. ಮಾರುತಿ ಮಾತನಾಡಿದರು.
ಡಿ.ವಿ.ಎಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರಾದ ಗುರುಸಿದ್ದೇಶ್ ಕೆ.ಜಿ ಮಾತನಾಡಿ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪರಿಷತ್ ನ ಜೊತೆ ನಾವೆಲ್ಲರೂ ಸಹಕರಿಸುವುದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರುವಲ್ಲಿ ಮಸಾಪ ಯಶಸ್ವಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಮಾರು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಕವನ ವಾಚನದಲ್ಲಿ ಭಾಗವಹಿಸಿದ ಮಕ್ಕಳಿಗೆ ಪರಿಷತ್ ವತಿಯಿಂದ ಪುಸ್ತಕ ಬಹುಮಾನ ನೀಡಲಾಯಿತು. ಜಿಲ್ಲಾ ಮ.ಸಾ.ಪ ಉಪಾಧ್ಯಕ್ಷ ಬಿ ವಿಜಯಕುಮಾರ್, ಮಸಾಪ ಪದಾಧಿಕಾರಿಗಳು, ಶಾಲಾ ಶಿಕ್ಷಕಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು, ಸ್ವಾಮಿ ಸ್ವಾಗತಿಸಿದರು, ರಾಜೇಶ್ ವಂದಿಸಿದರು. ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು.