ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 2024-25 ರ ಶಾಲಾ ವಾರ್ಷಿಕೋತ್ಸವ ಚಿಣ್ಣರ ಕಲರವ ವೈಭವ ಸಮಾರಂಭವು ಅತ್ಯಂತ ಅದ್ದೂರಿಯಾಗಿ ನಡೆಯಿತು.
ಚಳ್ಳಕೆರೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುರೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ ಅಲ್ಲದೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರದರ್ಶಿಸಲು ಇಂತಹ ವೇದಿಕೆಗಳು ಅವಶ್ಯಕ ಎಂದರು, ಇಲ್ಲಿನ ಶಾಲಾ ಕೊಠಡಿಗಳ ದುರಸ್ತಿಗೆ ಅನುದಾನವನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಎಲ್.ರತ್ನಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಶಾಲೆಯಲ್ಲಿ ಸಹ ಪಠ್ಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಮುಂದಿನ ಉತ್ತಮ ಫಲಿತಾಂಶ ನಿರೀಕ್ಷೆಯೊಂದಿಗೆ ಗ್ರಾಮದ ಎಲ್ಲ ಪೋಷಕರು ನಮ್ಮ ಶಾಲೆಯ ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ಶ್ರಮ ವಹಿಸುತ್ತಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
ಚಿಕ್ಕಮ್ಮನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕೆ.ಏಚ್ ಜಗನ್ನಾಥ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಯಾವ ಖಾಸಗಿ ಸಂಸ್ಥೆಯ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ,ಬೋಧನೆ ಉಚಿತ ಊಟ ವಸತಿ ವ್ಯವಸ್ಥೆ ಇರುತ್ತದೆ ಆದರೂ ಖಾಸಗಿ ಶಾಲೆಗಳಿಗೆ ಜನರು ಹೆಚ್ಚು ಒಲವು ಮತ್ತು ನೋಂದಣಿ ಮಾಡಿಕೊಳ್ಳುತ್ತಿರುವುದು ಹಾಗೂ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು, ಶಾಲೆಯ ಸಹ ಶಿಕ್ಷಕಿಯಾದ ಆರ್.ಆಶಾ ರವರು 2024-25 ರ ಶಾಲಾ ವಾರ್ಷಿಕ ವರದಿಯನ್ನು ಮುಖ್ಯ ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಓದಿ ಪ್ರಸ್ತುತ ಪಡಿಸಿದರು ಹಾಗೆ ಪೋಷಕರ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಸುರೇಶ್, ವಿಷ್ಣುವರ್ಧನ್, ಬೇಡರೆಡ್ಡಿಹಳ್ಳಿ ಶಾಲೆಯ ಶಿಕ್ಷಕ ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಟಿ ರೇವಣ್ಣ, ದ್ರಾಕ್ಷಾಯಿಣಮ್ಮ ನಾಗರಾಜ್,ಟಿ.ರಾಜಣ್ಣ, ಲಕ್ಷ್ಮೀದೇವಿ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಡಿ.ನಾಗರಾಜ್, ಉಪಾಧ್ಯಕ್ಷರಾದ ಶಿವಾರೆಡ್ಡಿ,
ಸದಸ್ಯರಾದ ಟಿ.ತಿಪ್ಪೇಸ್ವಾಮಿ, ಡಿ.ವಿಜಯ ಕುಮಾರ್, ಬಸವರಾಜು,ಡಿ.ಲಿಂಗರಾಜ್, ಶ್ರೀಕಾಂತ್, ಎಸ್. ಸುಶೀಲಮ್ಮ ಇನ್ನಿತರರು ಹಾಜರಿದ್ದರು. ಆರ್.ಶಾರದಾ ಪ್ರಾರ್ಥಿಸಿದರು. ಸಹ ಶಿಕ್ಷಕ ಜಿ.ಟಿ ಬಸವರಾಜ್ ಸ್ವಾಗತಿಸಿದರು. ಜೆ.ಸುಪ್ರಿಯಾ ನಿರೂಪಿಸಿದರು. ಎಸ್ ತಿಪ್ಪಮ್ಮ ವಂದಿಸಿದರು.