ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಆರಂಭಗೊಂಡಿರುವ ನೂತನ ಕಟ್ಟಡ ಕಾಮಗಾರಿ ಯಾವಾಗಲೋ ಉದ್ಘಾಟನೆಯಾಗಬೇಕಿದ್ದು ತಡವಾಗಿದೆ. ಡಿ. ೩೧ ಕ್ಕೆ ಉದ್ಘಾಟನೆಯಿಟ್ಟುಕೊಳ್ಳಿ ಎಂದು ಸಂಸದ ಗೋವಿಂದಕಾರಜೋಳ ಇಂಜಿನಿಯರ್ ಹಾಗು ಗುತ್ತಿಗೆದಾರರಿಗೆ ಸೂಚಿಸಿದರು.
ರೈಲ್ವೆ ಸ್ಟೇಷನ್ ಬಳಿ ನೂತನ ಕಟ್ಟಡ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದರು. ಚಿಕ್ಕಜಾಜೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿವರೆಗೆ ರೈಲ್ವೆಗೆ ೩೪೦೦ ಕೋಟಿ ರೂ.ಅನುದಾನ ಸಿಕ್ಕಿದೆ. ಇದರಿಂದ ಆರ್ಥಿಕ ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲವಾಗುತ್ತದೆ. ಪಾವಗಡ-ಮಡಕಶಿರಾ ರೈಲು ಮಾರ್ಗಕ್ಕೆ ೨೬೫ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.
ರಾಜ್ಯ ಸರ್ಕಾರ ತನ್ನ ಪಾಲಿನ ಸೌಲಭ್ಯಗಳನ್ನು ಒದಗಿಸಬೇಕಷ್ಟೆ. ಚಿಕ್ಕಜಾಜೂರು, ಚಿತ್ರದುರ್ಗ, ಹಳಿಯೂರು ರೈಲ್ವೆ ಗೇಟ್‌ಗಳಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಚಿತ್ರದುರ್ಗದಲ್ಲಿ ದಿನಕ್ಕೆ ಮೂವತ್ತು ಸಾರಿ ರೈಲ್ವೆ ಗೇಟ್ ಹಾಕುವುದರಿಂದ ಬಹಳ ತೊಂದರೆಯಾಗುತ್ತಿದೆ. ಇಲ್ಲಿ ಅಂಡರ್ ಬ್ರಿಡ್ಜ್ ನಿರ್ಮಾಣ ಕುರಿತು ಕೇಂದ್ರದ ಜೊತೆ ಮಾತನಾಡುತ್ತೇನೆ. ಚಿತ್ರದುರ್ಗ, ದಾವಣಗೆರೆಗೆ ೫೫೦ ಕೋಟಿ ರೂ.ಗಳನ್ನು ನೀಡಲಾಗಿದೆ. ಐದು ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚು ಹಣ ಬಂದಿದೆ ಎಂದು ತಿಳಿಸಿದರು.
ನೂತನ ಕಟ್ಟಡದಲ್ಲಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಜಾಗವಿರಬೇಕು. ೨೦೨೩ ಡಿಸೆಂಬರ್‌ನಲ್ಲಿ ಆರಂಭಗೊಂಡ ಕಾಮಗಾರಿ ಇನ್ನು ಏಕೆ ಮುಗಿದಿಲ್ಲ. ತಡವಾಗುವುದು ಬೇಡ. ಚುರುಕಿನಿಂದ ಕೆಲಸವಾಗಬೇಕು. ೧೨ ಕೋಟಿ ರೂ. ಕಾಮಗಾರಿಗೆ ಚಿತ್ರದುರ್ಗದಲ್ಲಿ ಯಾರು ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ಸಿಗಲಿಲ್ಲವೇ ಎಂದು ರೈಲ್ವೆ ಅಧಿಕಾರಿಯನ್ನು ಪ್ರಶ್ನಿಸಿದ ಸಂಸದ ಗೋವಿಂದ ಕಾರಜೋಳರವರು ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲು ಮಾರ್ಗ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೇ ಇಲ್ಲವೋ ಎನ್ನುವುದನ್ನು ಉಪವಿಭಾಗಾಧಿಕಾರಿಗೆ ಕೇಳಿ ಎಂದು ಸೂಚಿಸಿದರು.
ಅಮೃತ ಭಾರತ್ ರೈಲ್ವೆ ಸ್ಟೇಷನ್ ಮಾಡಬೇಕೆಂಬುದು ದೇಶದ ಪ್ರಧಾನಿ ಮೋದಿರವರ ಕನಸು. ಕೇಂದ್ರ ಸರ್ಕಾರದಲ್ಲಿ ದುಡ್ಡಿಗೆ ತೊಂದರೆಯಿಲ್ಲ. ತುರ್ತಾಗಿ ಕಾಮಗಾರಿ ಕೆಲಸ ಪೂರ್ಣಗೊಳಿಸುವಂತೆ ಹೇಳಿದರು.
ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಖಜಾಂಚಿ ಮಾಧುರಿ ಗಿರೀಶ್, ಮಾಜಿ ಅಧ್ಯಕ್ಷ ಎ.ಮುರಳಿ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.