ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ವರಿಷ್ಠರು ಅಳೆದು ತೂಗಿ ಬಾಕಿ ಇದ್ದ 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಬಿಜೆಪಿ ಪಕ್ಷದ ರಾಜ್ಯ ಚುನಾವಣಾ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿ ನೂತನ ಜಿಲ್ಲಾಧ್ಯಕ್ಷರುಗಳ ನೇಮಕ ಮಾಡಿದ್ದಾರೆ.
ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಲಾಗಿದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡುವಂತೆ ನೂತನ ಅಧ್ಯಕ್ಷರಿಗೆ ಸೂಚಿಸಲಾಗಿದೆ.
ರಾಜ್ಯ ಚುನಾವಣಾಧಿಕಾರಿ ಕ್ಯಾ. ಗಣೇಶ್ ಕಾರ್ಣಿಕ್ ಅವರು ನೂತನ ಜಿಲ್ಲಾ ಅಧ್ಯಕ್ಷರನ್ನು ಅಭಿನಂದಿಸಿ, ಪಕ್ಷ ನೀಡಿರುವ ಹೊಣೆಗಾರಿಕೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸಧೃಢಗೊಳಿಸಬೇಕು, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಬೇಕೆಂದು ಅವರು ಆಶಿಸಿದ್ದಾರೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪಟ್ಟಿ
ಮೈಸೂರು ಗ್ರಾಮಾಂತರ – ಕೆಎನ್ ಸುಬ್ಬಣ್ಣ, ಹಾಸನ – ಸಿದ್ದೇಶ್ ನಾಗೇಂದ್ರ, ಕೊಡಗು – ರವಿ ಕಾಳಪ್ಪ, ಉಡುಪಿ – ಕುತ್ಯಾರು ನವೀನ್ ಶೆಟ್ಟಿ, ದಾವಣಗೆರೆ – ಎನ್ ರಾಜಶೇಖರ್, ಹಾವೇರಿ – ವಿರೂಪಾಕ್ಷಪ್ಪ ಬಳ್ಳಾರಿ, ಚಿತ್ರದುರ್ಗ – ಕೆ.ಟಿ. ಕುಮಾರಸ್ವಾಮಿ, ತುಮಕೂರು – ಎಚ್.ಎಸ್. ರವಿಕುಮಾರ್ (ಹೆಬ್ಬಾಕ), ಮಧುಗಿರಿ – ಚಿದಾನಂದ ಎಂ. ಗೌಡ, ಚಿಕ್ಕಬಳ್ಳಾಪುರ – ಎಸ್.ವಿ. ರಾಮಚಂದ್ರ ಗೌಡ ಇವರನ್ನ ಬಿಜೆಪಿ ವರಿಷ್ಠರು ನೇಮಕ ಮಾಡಿದ್ದಾರೆ.
ಸತತ 3ನೇ ಸಲ ಹೆಬ್ಬಾಕ ರವಿಶಂಕರ್ ಆಯ್ಕೆ ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಕೆ.ಟಿ ಕುಮಾರಸ್ವಾಮಿ ಆಯ್ಕೆ ಅಚ್ಚರಿ ಮೂಡಿಸಿದೆ. ತನಗೆ ಅಧ್ಯಕ್ಷ ಸ್ಥಾನ ನೀಡಿ ಎಂದು ಎಲ್ಲೂ ಅವರು ಕೇಳಿಕೊಂಡಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು.
ನಂತರದ ದಿನಗಳಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ವರಿಷ್ಠರು ಅಳೆದು ತೂಗಿ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಒಂದಿಷ್ಟು ಉತ್ತಮ ಹೆಸರಿರುವ ಮಾಜಿ ಸಚಿವ ಚಳ್ಳಕೆರೆ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ ಕುಮಾರಸ್ವಾಮಿ ಅವರನ್ನ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಅಚ್ಚರಿ ಬೆಳವಣಿಗೆ ಎನ್ನಬಹುದಾದರೂ ಈ ಮೂಲಕ ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಬಿಜೆಪಿ ತಂತ್ರ ಹಣೆದು ಜಿಲ್ಲಾಧ್ಯಕ್ಷ ಸ್ಥಾನವನ್ನ ವಾಲ್ಮೀಕಿ ಸಮಾಜಕ್ಕೆ ನೀಡಲಾಗಿದೆ.
ತುಮಕೂರು ಜಿಲ್ಲೆಯ ಸಂಘಟನಾತ್ಮಕ ಜಿಲ್ಲಾಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಹೆಬ್ಬಾಕ ರವಿಶಂಕರ್ ಪುನರಾಯ್ಕೆ ಆಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲಾಧ್ಯಕ್ಷರನ್ನಾಗಿ ಎಚ್.ಎಂ.ರವಿಂಶಕರ್ (ಹೆಬ್ಬಾಕ ರವಿಶಂಕರ್) ಪುನರಾಯ್ಕೆ ಮಾಡುವ ಮೂಲಕ 3ನೇ ಸಲ ಅವಕಾಶ ಪಡೆದಿದ್ದಾರೆ.
ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಂಚಿಟಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಆ ಸಮುದಾಯದ ಮುಖಂಡ, ವಿಪ ಸದಸ್ಯ ಚಿದಾನಂದ್ ಎಂ.ಗೌಡರಿಗೆ ಮಧುಗಿರಿಯ ಸಂಘಟನಾತ್ಮಕ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವಿಪ ಸದಸ್ಯ, ಶಿರಾದ ಚಿದಾನಂದ್ ಎಂ.ಗೌಡ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷರಾಗುವ ಚರ್ಚೆ ಕಳೆದ ಕೆಲವು ತಿಂಗಳಿಂದ ಗರಿಗೆದರಿತ್ತು. ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ. ಹನುಮಂತೇಗೌಡ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ಚಿದಾನಂದ್ ಎಂ.ಗೌಡ ಸಂಘಟನೆ ಸಾರಥ್ಯ ವಹಿಸಲಿದ್ದಾರೆ. ಬಿಜೆಪಿ ಸಂಘಟನಾ ಪರ್ವ ರಾಜ್ಯ ಚುನಾವಣಾಧಿಕಾರಿ ಕ್ಯಾ ಗಣೇಶ್ ಕಾರ್ಣಿಕ್ ಪತ್ರಿಕಾ ಪ್ರಕಟಣೆ ಹೊರಡಿಸಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದಾರೆ.