ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ದೂರಿದ್ದಾರೆ.
ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೇಸ್ ಸರ್ಕಾರವೇ ಕಾರಣ ಎಂದು ಸಿಟಿ ರವಿ ಎಚ್ಚರಿಸಿದ್ದಾರೆ.
ಇಂದು ನನ್ನ ಮೇಲೆ ದಾಖಲಾದ ಸುಳ್ಳು ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನನ್ನ ಜೊತೆಗಿದ್ದು ಧೈರ್ಯ ತುಂಬಿದ ನನ್ನ ನೆಚ್ಚಿನ ಬಿಜೆಪಿ ಕಾರ್ಯಕರ್ತ ಬಂಧುಗಳಿಗೆ, ಜೊತೆಗೆ ನಿಂತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ, ಭಾರತೀಯ ಜನತಾ ಪಾರ್ಟಿಯ ಎಲ್ಲಾ ರಾಷ್ಟೀಯ ನಾಯಕರು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಶಾಸಕರು ವಿಧಾನ ಪರಿಷತ್ತ್ , ವಿಧಾನಸಭೆ ಶಾಸಕರು, ಸಂಸದರು, ಮಾಜಿ ಸಚಿವರು, ಹಿರಿಯ ನಾಯಕರು, ಸ್ನೇಹಿತರು, ಮಾಧ್ಯಮದ ಮಿತ್ರರಿಗೆ ಧನ್ಯವಾದಗಳನ್ನು ರವಿ ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ ತುಘಲಕ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ನನ್ನ ಕಾರ್ಯಕರ್ತ ಬಂಧುಗಳೆ, ನಿಮ್ಮೆಲ್ಲರ ಬೆಂಬಲ ನನ್ನ ಶಕ್ತಿಯನ್ನು ಮತ್ತಷ್ಟು ಇಮ್ಮುಡಿಗೊಳಿಸಿದೆ, ದುಷ್ಟ ಶಕ್ತಿಗಳ ವಿರುದ್ಧ ಇನ್ನೂ ಹೆಚ್ಚಾಗಿ ಹೋರಾಡಲು ಶಕ್ತಿ ತುಂಬಿದೆ. ಭಾರತೀಯ ಜನತಾ ಪಾರ್ಟಿಯ ನಾವೆಲ್ಲರೂ ಒಂದಾಗಿ ಕರ್ನಾಟಕವನ್ನು “ಗೂಂಡಾ ರಿಪಬ್ಲಿಕ್” ಮಾಡಲು ಅವಕಾಶ ಕೊಡುವುದಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.