ಸಿಟಿ ರವಿ-ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಫೆ.24ಕ್ಕೆ ಮುಂದೂಡಿದ ಕೋರ್ಟ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಿಟಿ ರವಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಧ್ಯ ನಡೆದ  ಅವಹೇಳನಕಾರಿ ಹೇಳಿಕೆ ಆರೋಪ ಸಂಬಂಧ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಪರಿಷತ್ ಸದಸ್ಯ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಫೆ.
24ಕ್ಕೆ ಮುಂದೂಡಿ ಆದೇಶಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪರ ವಕೀಲರ ಮನವಿಯ ಮೇರೆಗೆ ವಿಚಾರಣೆ ಮುಂದೂಡಿತು.

ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಸಿ.ಟಿ.ರವಿ ಪರ ವಾದ ಮಂಡಿಸಿ, ಅರ್ಜಿಯ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸಲಾಗಿದ್ದು, ಸದನದಲ್ಲಿ ಸದಸ್ಯರಿಗೆ ಸಂಪೂರ್ಣವಾದ ವಿನಾಯಿತಿ ಇರುತ್ತದೆ. ಸದನದಲ್ಲಿ ನಡೆದ ವಿಚಾರವನ್ನು ಆಧರಿಸಿ ಕ್ರಿಮಿನಲ್‌ಅಥವಾ ಸಿವಿಲ್‌ಪ್ರಕರಣ ಹೂಡಲಾಗದು. ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಲಾಗಿದ್ದು, ಅವರು ರೂಲಿಂಗ್‌ನೀಡಿದ್ದಾರೆ. ಹೀಗಾಗಿ ಎಫ್‌ಐಆರ್‌ದಾಖಲಿಸಲು ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸದನ ನಡೆಯಲಿ, ನಡೆಯದಿರಲಿ, ಸದಸ್ಯರು ಭಾಗಿಯಾಗಲಿ ಭಾಗಿಯಾಗದಿರಲಿ ಅವರು ಸದನದಲ್ಲಿ ಮಾತನಾಡುವ ಎಲ್ಲ ಮಾತುಗಳಿಗೂ ರಕ್ಷಣೆ ಇರಲಿದೆ. ಅರ್ಜಿದಾರ ಸಿ.ಟಿ ರವಿ ಮತ್ತು ದೂರುದಾರರಾದ ಲಕ್ಷ್ಮೀ ಹೆಬ್ಬಾಳ್ಕರ್ ಸದನದ ಸದಸ್ಯರಾಗಿದ್ದಾರೆ. ಅವರ ಬಗ್ಗೆ ಅರ್ಜಿದಾರರಿಗೆ ಗೌರವ ಇದೆ ಎಂದು ನಾವದಗಿ ತಿಳಿಸಿದರು.

ಸರ್ಕಾರದ ಪರ ವಾದ ಮಂಡಿಸಿದ ಎಸ್ಪಿಪಿ ಬೆಳ್ಳಿಯಪ್ಪ, ಘಟನೆ ಸಂಬಂಧ ನೀಡಿರುವ ವರದಿಯಲ್ಲಿ ಸದನ ನಡೆಯುತ್ತಿರಲಿಲ್ಲ. ಆದರೆ, ಅವಹೇಳನಕಾರಿ ಪದ‌ಬಳಕೆ ಆಗಿದೆ ಎಂದಷ್ಟೇ ತಿಳಿಸಿದ್ದಾರೆ ಎಂದು ವಾದ ಮಂಡಿಸಿದರು. ವಾದ ಆಲಿಸಿದ ಪೀಠ, ವಿಚಾರಣೆಯನ್ನು ಮುಂದೂಡಿ ಆದೇಶಿಸಿದೆ.

ಏನಿದು ಪ್ರಕರಣ:
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಸಿ. ಟಿ. ರವಿ ಹೈಕೋರ್ಟ್ ಮೆಟ್ಟಿಲೇರಿದ್ದರು.
 

 

Share This Article
error: Content is protected !!
";