ಸಮಾನತೆ ಕಾಪಾಡುವಲ್ಲಿ ನಾಗರಿಕ ಹಕ್ಕುಗಳ ಅರಿವು ಮುಖ್ಯ:ಜಿಲ್ಲಾಧಿಕಾರಿ ಬಸವರಾಜು

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನ್ಯಾಯಸಮ್ಮತ ಸಮಾಜ ನಿರ್ಮಿಸಲು ಭಾರತದ ಸಂವಿಧಾನದಲ್ಲಿ ಹಲವಾರು ವಿಧಿ ನಿಯಮಗಳನ್ನು ಜಾರಿಗೊಳಿಸಿದೆ ಅವುಗಳನ್ನು ಸಮಾಜದ ಬೆಳವಣಿಗೆಯಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜವನ್ನು ಕಾಣಬಹುದು ಹಾಗಾಗಿ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳು ನಡೆಯಬೇಕು
, ಸಾಮಾಜಿಕ ನ್ಯಾಯದ ಅರಿವು ಅವಶ್ಯಕ ಎಂದು ಜಿಲ್ಲಾಧಿಕಾರಿ ಬಸವರಾಜು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ  ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ಕುರಿತು ಒಂದು ದಿನದ ಅರಿವು ಕಾರ್ಯಕ್ರಮವನ್ನು

- Advertisement - 

ಉದ್ಘಾಟಿಸಿ ಮಾತನಾಡಿದ ಅವರು ಸಮಾನತೆಯ ಅರಿವು ತಿಳಿದುಕೊಳ್ಳುವುದರಲ್ಲಿ ನಾವೆಲ್ಲ ಹಿಂದೆಯೇ ಉಳಿದಿದ್ದೇವೆ. ಅಂಬೇಡ್ಕರ್ ಅವರು  ಹಲವಾರು ದೇಶಗಳನ್ನು ಸುತ್ತಿ ಅಲ್ಲಿನ ಭಾಷೆ, ಕಾನೂನು ವ್ಯವಸ್ಥೆ ಎಲ್ಲಾವನ್ನು ತಿಳಿದುಕೊಂಡು ನಮ್ಮ ದೇಶದ ಸಂಸ್ಕೃತಿ, ವ್ಯವಸ್ಥೆ ಎಲ್ಲಾವನ್ನು ಪರಿಗಣಿಸಿ ಸಧೃಡ ಸಂವಿಧಾನವನ್ನು ನೀಡಿದ್ದಾರೆ, ಹಿಂದಿನ ಕಾಲದಿಂದಲೂ ಈ ಅಸಮಾನತೆ ಎನ್ನುವುದು ಬೆಳೆಯುತ್ತಲೇ ಬಂದಿದೆ ಹಾಗಾಗಿ ನಾವೆಲ್ಲರು ಸಾಮಾಜಿಕ ನ್ಯಾಯದ ಬಗ್ಗೆ ತಿಳಿದುಕೊಳ್ಳಬೇಕು ಆಗ ಮಾತ್ರ  ಸರ್ವರಿಗೂ ಎಲ್ಲಾದರಲು ಸಮಾನತೆ ಸಿಗಬೇಕು ಎನ್ನುವ ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗುತ್ತದೆ ಎಂದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ಅವರು ಮಾತನಾಡಿ ಎಲ್ಲಾ ರೀತಿಯ ಕಾನೂನು ಕ್ರಮ ಇದ್ದರೂ ಈಗಲೂ ಜಾತಿ ಅಸಮಾನತೆ, ಜಾತಿನಿಂದನೆ ಹಾಗೂ ಸಾಮಾಜಿಕ ಅಸಮಾನತೆ ಸಮಾಜದಲ್ಲಿ ನಡೆಯುತ್ತಿರುವುದು ಇದೊಂದು ಕೆಟ್ಟ ಸಂಗತಿ. ಯಾವುದೇ ವ್ಯಕ್ತಿಗೆ ಹುಟ್ಟಿನಿಂದ ಸಾವಿನಿವರೆಗೂ ಜಾತಿ,ವರ್ಣ,ಲಿಂಗ,ಧರ್ಮದ ಆಧಾರದ ಮೇಲೆ ಬೇಧ ಭಾವ ಮಾಡಬಾರದು. ಸಮಾಜದಲ್ಲಿ ಸಮಾನತೆಯನ್ನು ಕಾಪಾಡುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು.

- Advertisement - 

ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಸಾಮಾಜಿಕ ನ್ಯಾಯದ ಮುಖ್ಯ ಉದ್ದೇಶವಾಗಿರುತ್ತದೆ ಹಾಗಾಗಿ ದೌರ್ಜನ್ಯವಾದರೆ ಅಥವಾ ದೌರ್ಜನ್ಯ ಕಂಡು ಬಂದರೆ ಯಾವುದೇ ರೀತಿಯ ಭಯ ಪಡದೇ ದೂರು ನೀಡುವಂತೆ ತಿಳಿಸಿದರು.

ಡಿವೈಎಸ್ಪಿ ರವಿ ಪಿ ಅವರು ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾತನಾಡಿ  ವಿಧಿ 14-18 ರವರೆಗೂ ಜಾತಿನಿಂದನೆ ಮತ್ತು ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಂವಿಧಾನದಲ್ಲಿ ತಿಳಿಸಲಾಗಿದೆ.ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ತಾರತಮ್ಯವನ್ನು ತಡೆಯುವ ಕಾನೂನು ಇದಾಗಿದೆ.

1989 ರ ದೌರ್ಜನ್ಯ ತಡೆ ಕಾಯ್ದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು, ಅಂತಹ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಜಾರಿಗೆ ತರಲಾಗಿದೆ. ಈ ಕಾಯ್ದೆಯಲ್ಲಿ ಯಾವುದೇ ಅನುಸೂಚಿತ ಜಾತಿ ಮತ್ತು ಪಂಗಡದವರಿಗೆ ಬಾಯಿಗೆ ವಸ್ತುವನ್ನು ತುರುಕಿದರೆ, ಮನೆಮುಂದೆ ಸತ್ತ ಪ್ರಾಣಿ ಹಾಕಿದರೆ, ಎಲ್ಲರ ಮುಂದೆ ತಲೆ ಮತ್ತು ಮೀಸೆ ಬೋಡಿಸಿದರೆ ಅಥವಾ ತೆಗೆದರೆ,

ಜೀತಕ್ಕೆ ಬಳಸಿಕೊಂಡರೆ, ದೇವದಾಸಿ ಪದ್ಧತಿ, ಅಡ್ಡಿ ಪಡಿಸುವುದು, ಭಯ ಹುಟ್ಟಿಸುವುದು, ಮತ ಹಾಕುವುದನ್ನು ತಡೆಯುವುದು ಅಥವಾ ನೀನು ನಮ್ಮ ಪಕ್ಷಕ್ಕೆ ಮತ ಹಾಕಬೇಕು ಎನ್ನುವುದು, ಈ ರೀತಿ ಅವರ ಭಾವನೆಗೆ ದಕ್ಕೆ ತರುವಂತಹ ಯಾವುದೇ ರೀತಿಯ ಅಡಚಣೆಯನ್ನು ಮಾಡಬಾರದು ಮಾಡಿದರೆ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬಹುದು.ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ   ಮಾಡಿದ್ದಲ್ಲಿ 6 ತಿಂಗಳು ಅಥವಾ ಜೀವಿತವಧಿವರೆಗೂ ಶಿಕ್ಷೆಯಾಗುವ ಅವಕಾಶವಿರುತ್ತದೆ ಎಂದರು.

 ಅರಿವು ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಪರಿಕಲ್ಪನೆ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಯ ಅಧಿನಿಯಮ ಮತ್ತು ನಿಯಮಗಳ ಬಗ್ಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ವಿಷಯವನ್ನು ಕುರಿತು ಕಾರ್ಯಗಾರ ನಡೆಸಲಾಯಿತು.

 ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮ, ಡಾ.ಬಿ.ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆಯ ತರಬೇತಿ ಸಂಯೋಜಕರಾದ ಡಾ. ಸಚಿನ್ ಬಿ.ಎಸ್ ಹಾಗೂ ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

 

Share This Article
error: Content is protected !!
";