ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಐತಿಹಾಸಿಕ ಪುರಾತನ ಇತಿಹಾಸ ಪ್ರಸಿದ್ಧ ಚಿತ್ರದುರ್ಗ ನಗರದಲ್ಲಿ ಶಿಲಾ ಶಾಸನದ ಸುತ್ತ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ನಗರಸಭೆಗೆ ದೂರು ನೀಡಿದರೂ ಇದುವರೆವಿಗೂ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ ಎಂದು ಆರೋಪಿ ವಿಶ್ವ ಹಿಂದೂ ಪರಿಷದ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಕೋಟೆಯನ್ನು ಅನೇಕ ರಾಜವಂಶರುಗಳ ಆಳ್ವಿಕೆಗೆ ಒಳಪಟ್ಟತಂತಹ ಅತ್ಯಂತ ಪುರಾತನ ಇತಿಹಾಸದ ನಗರವಾಗಿದೆ. ಆದರೆ ಇದನ್ನು ಹಾಳು ಮಾಡುವ ದುಷ್ಟ ಶಕ್ತಿಗಳು ಇತಿಹಾಸದ ಶಿಲಾ ಶಾಸನವನ್ನು ನಾಶ ಮಾಡುತ್ತಿದ್ದಾರೆ.
ಚಿತ್ರದುರ್ಗ ನಗರದ ನಗರಸಭೆ ವ್ಯಾಪ್ತಿಗೆ ಒಳಪಡುವ ಚೇಳುಗುಡ್ಡ ಸಮೀಪದಲ್ಲಿರುವ ಅಗಸನಕಲ್ಲು ರಸ್ತೆಯ ಪಕ್ಕದಲ್ಲಿರುವ ಬಂಡೆಯ ಮೇಲೆ ಏಕನಾಥೇಶ್ವರಿಯ ಶಿಲಾ ಶಾಸನವಿದ್ದು ಇದು ಇತಿಹಾಸದಲ್ಲಿ ಉಲ್ಲೇಖವಿದೆ.

ಆಗೀನ ಕಾಲದಲ್ಲಿ ವಿಜಯ ನಗರದ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ವಿಜಯನಗರದ ವಿಜಯರಾಯರಿಂದ ಒಳಿತಾಗಲಿ ಎಂದು ವಿರುಪಣ್ಣನವರು ತಮ್ಮ ತೋಟದ ಜಾಗವನ್ನು ಚಿತ್ರದುರ್ಗದ ಆದಿದೇವತ ಶ್ರೀ ಏಕನಾಥೇಶ್ವರಿ ಅಮ್ಮನವರಿಗೆ ದಾನ ಕೊಟ್ಟ ಘಟನೆಯು ಪುಸ್ತಕದಲ್ಲಿ ವಿವರಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಶಿಲಾ ಶಾಸನವಿದೆ.
ಇದನ್ನು ಹಾಳು ಮಾಡಲು ಶಾಸನವಿರುವ ಜಾಗವನ್ನು ಒತ್ತುವರಿ ಮಾಡಿ ನಗರಸಭೆಯಿಂದ ಯಾವ ಅನುಮತಿ ಪಡೆಯದೆ ಇತಿಹಾಸದ ಶಿಲಾ ಶಾಸನಕ್ಕೆ ಅಡ್ಡಲಾಗಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷದ್‌ನಿಂದ ಇತ್ತೀಚೆಗೆ ಚಿತ್ರದುರ್ಗ ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು.
ದೂರು ನೀಡಿದ ನಂತರ ಇದರ ಕಾಮಗಾರಿ ಅರ್ಧಕ್ಕೆ ಸ್ಥಗೀತಗೊಳಿಸಲಾಗಿತ್ತು. ಶಿಲಾ ಶಾಸನಕ್ಕೆ ಅರ್ಧಕ್ಕೆ ನಿಂತ ಕಟ್ಟಡವು ಶಾಸನಕ್ಕೆ ಅಡ್ಡಲಾಗಿದೆ ಎಂದು ಮರುದೂರನ್ನು ತೆರವುಗೊಳಿಸುವಂತೆ ಮನವಿ ನೀಡಲಾಗಿತ್ತು. ಆದರೆ ನಗರಸಭೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಅಕ್ರಮ ಕಟ್ಟಡ ತೆರವು ಮಾಡಿ ಶಿಲಾ ಶಾಸನ ಉಳಿಸಿ ಇತಿಹಾಸ ರಕ್ಷಿಸಬೇಕೆಂದು ವಿನಂತಿ ಮಾಡಿದ್ದಾರೆ. ಇಲ್ಲವಾದಲ್ಲಿ ಭಕ್ತಾಧಿಗಳು ಹಾಗೂ ಹಿಂದೂ ಸಂಘಟನೆಗಳು ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪಿ. ರುದ್ರೇಶ್ ವಿಶ್ವ ಹಿಂದೂ ಪರಿಷದ್ ಮುಖಂಡರು, ಏಕನಾಥೇಶ್ವರಿ ಸಮಿತಿಯ ಹನುಮಂತ, ಶ್ರೀನಿವಾಸ್, ಲೀಲಾದರ್ ಠಾಕೂರ್, ಶಿವಶಕ್ತಿ ಬಾಲಾಜಿ, ಮಂಜು, ಗುರುರಾಜ, ಮಲ್ಲೇಶ್, ಕಿರಣ್ ಕುಮಾರ್, ದಿಲೀಪ್ ಇತರರು ಇದ್ದರು.

