ಯೂರಿಯಾ ಕೊರತೆ, ಸಿಎಂ, ಕೃಷಿ ಸಚಿವರು ಕೂಡಲೇ ರಾಜೀನಾಮೆ ನೀಡಲಿ-ಕೆಎಸ್ ನವೀನ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಯೂರಿಯಾ ಕೊರತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆಯುವ ಮೂಲಕ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮುಖ್ಯಮಂತ್ರಿ, ಕೃಷಿ ಸಚಿವರು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈಗಾಗಲೇ ಕೇಂದ್ರ ಸರ್ಕಾರ 7.08 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ವಿತರಿಸಿದೆ. ಅಗತ್ಯಕ್ಕಿಂತ ಹೆಚ್ಚಿನ ಯೂರಿಯಾ ಪೂರೈಕೆಯಾಗಿದೆ. ಆದರೆ ಕೃಷಿ ಅಧಿಕಾರಿಗಳ ಲೋಪ ಮತ್ತು ರಾಜ್ಯ ಸರ್ಕಾರ ರಸಗೊಬ್ಬರದ ಅನುದಾನ ಬೇರೆಡೆ ವರ್ಗಾಯಿಸಿರುವುದರಿಂದ ರಸಗೊಬ್ಬರದ ವಿತರಣೆಯಲ್ಲಿ ಲೋಪ ಉಂಟಾಗಿದೆ.

- Advertisement - 

1.64 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ದಾಸ್ತಾನು ಉಳಿಕೆಯಿದೆ. ಉಳಿಕೆ ಇರುವ ಯೂರಿಯಾ ಅನ್ನು ಸಮರ್ಪಕವಾಗಿ ಅಗತ್ಯ ಇರುವ ಜಿಲ್ಲೆಗಳಿಗೆ ಪೂರೈಕೆ ಮಾಡಿದ್ದರೂ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಜುಲೈ ವರೆಗೆ 5.34 ಲಕ್ಷ ಟನ್ ರಸಗೊಬ್ಬರಗಳನ್ನು ಪೂರೈಸಿದೆ. ರಾಜ್ಯದಿಂದ 6.80 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆಯಿದ್ದರೆ, ಕೇಂದ್ರ 6.82 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ ಎಂದು ನವೀನ್ ತಿಳಿಸಿದರು.

- Advertisement - 

ರಾಜ್ಯದಲ್ಲಿ ತಲೆದೂರಿವ ಯೂರಿಯಾ ಕೊರತೆಯಿಂದ ರೈತರನ್ನು ಬೀದಿಗೆ ತರುವ ಕೆಲಸ ರಾಜ್ಯ ಸರ್ಕಾರದಿಂದ ಆಗಿದೆ. ಮಳೆಗಾಲದಲ್ಲಿ ಕೃಷಿ‌ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ರೈತ ಯೂರಿಯಾ ಗೊಬ್ಬರಕ್ಕಾಗಿ ದಿನವಿಡೀ ಬೀದಿಯಲ್ಲಿ ನಿಲ್ಲುವಂತಾಗಿದೆ ಎಂದು ದೂರಿದರು.

ಸಕಾಲಕ್ಕೆ ಗೊಬ್ಬರ ಹಾಕದಿದ್ದರೆ ಬೆಳೆ ಕಳೆದುಕೊಳ್ಳವ ಧಾರುಣ ಸ್ಥಿತಿಗೆ ರೈತ‌ ಬಂದಿದ್ದಾನೆ. ಇದರ ಸಂಪೂರ್ಣ ಹೊಣೆಗಾರಿಕೆ ಸಿಎಂ ಹಾಗು ಕೃಷಿ‌ ಸಚಿವರದ್ದು. ಕುರ್ಚಿ ಉಳಿಸಿಕೊಳ್ಳಲು ಹತ್ತಾರು‌ ಬಾರಿ ದೆಹಲಿಗೆ ದಂಡ ಯಾತ್ರೆ ಮಾಡುವ ಸಿದ್ದರಾಮಯ್ಯನವರು ಒಮ್ಮೆಯೂ ರೈತರ ಹಿತ ಕಾಯಲು ಒಂದು ಅಕ್ಷರವನ್ನು ಅಧಿಕಾರಿಗಳ ಜೊತೆ ಚರ್ಚೆ ನಡೆಸಿಲ್ಲ. ರೈತ ಬೀದಿಗೆ ಬಂದು‌ ಎಚ್ಚರಿಕೆ ನೀಡಿದಾಗ ದಿಢೀರ್ ಎಂಬಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೈತೊಳೆಕೊಂಡಿದ್ದಾರೆ ಎಂದು ನವೀನ್ ಕಿಡಿಕಾರಿದರು.

ರಾಜ್ಯದಲ್ಲಿ ರೈತರು ವಿವಿಧ ಬೆಳೆಗಳಿಗೆ ಬಳಕೆ ಮಾಡುವ ಸರಾಸರಿ ಬೇಡಿಕೆ 6.30 ಲಕ್ಷ‌ ಮೆಟ್ರಿಕ್ ಟನ್. ಆದರೆ, ಕೇಂದ್ರ 2.30 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಅಲೊಕೇಟ್ ಮಾಡಿರುವುದಾಗಿ ಪತ್ರದ ಮೂಲಕವೂ ತಿಳಿಸಲಾಗಿದೆ. ಆದ್ರೆ, ರಾಜ್ಯದ ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ರೈತರಿಗೆ ಯೂರಿಯಾ ಪೂರೈಕೆ ಮಾಡಬೇಕು ಎನ್ನುವ ಸಾಮಾನ್ಯ ಅರಿವು ಇಲ್ಲ. ಇದೂ ಅಲ್ಲದೆ ಪ್ರಸಕ್ತ ಮುಂಗಾರು ಹಂಗಾಮು ಅವದಿಗಿಂತ‌ ಮೊದಲೇ ಬಂದಿದೆ. ಕೃಷಿ ಚಟುವಟಿಕೆ ಹೆಚ್ಚಾಗಿದೆ ಎನ್ನುವ ಮಾಹಿತಿಯೇ ಆಡಳಿತ ರೂಢರಿಗೆ ಗೊತ್ತಿಲ್ಲ ಎಂದು ವಿಪ ಸದಸ್ಯ ನವೀನ್ ಹರಿಹಾಯ್ದಿದರು.

ರಾಜ್ಯದ ಬೇಡಿಕೆಗಿಂತ ಹೆಚ್ಚು ಯೂರಿಯಾ ಒದಗಿಸಿದ್ದರೂ ಕೃಷಿ ಇಲಾಖೆ ಸರಿಯಾಗಿ ವಿತರಣೆ ಮಾಡದೆ ಅಕ್ರಮ ದಾಸ್ತಾನು, ವ್ಯಾಪಾರಿಗಳಿಗೆ ಲಾಭ ಮಾಡಿಕೊಟ್ಟು ರೈತರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ. ಯೂರಿಯಾ ಮಾರಾಟವೇ ದೊಡ್ಡ ಷಡ್ಯಂತ್ರ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಯಾವ ಜಿಲ್ಲೆಗೆ ಎಷ್ಟು ಯೂರಿಯಾ ಒದಗಿಸಬೇಕು ಎಂಬ ಚಿಂತನೆಯೇ ಸರ್ಕಾರ ಮಾಡಿರಲಿಲ್ಲ. ಪ್ರತಿ ವರ್ಷ ಮುಂಗಡವಾಗಿ ರಾಜ್ಯ ಸರ್ಕಾರ ನಡೆಸುವವರು ಸಾವಿರ ಕೋಟಿ ಹಣ ಡೆಪಾಸಿಟ್ ಇಡುತ್ತಾರೆ.‌ ಆದರೆ, ಇವರು ಕೇವಲ 400 ಕೋಟಿ ಕೊಟ್ಟಿದ್ದಾರೆ. ಹೀಗಾಗಿ ರಸಗೊಬ್ಬರ ಕಾರ್ಖಾನೆಗಳು ಯೂರಿಯಾ ಸರಬರಾಜು ಮಾಡುತ್ತಿಲ್ಲ. ರಾಜ್ಯಕ್ಕೆ ನಿಗದಿಯಾಗಿದ್ದರೂ ಪಡೆಯುತ್ತಿಲ್ಲ. ತಿಂಗಳು ಬಿಟ್ಟು ಗೊಬ್ಬರ ಕೊಟ್ಟರೆ ರೈತರಿಗೆ ಉಪಯೋಗ ಆಗುವುದಿಲ್ಲ.  ಇಳುವರಿ ಕಡಿತವಾಗುತ್ತದೆ. ಬಂಡವಾಳ, ಶ್ರಮ‌ ನೀರಿಗೆ ಹಾಕಿದಂತಾಗುತ್ತದೆ ಎಂದು ನವೀನ್ ಆತಂಕ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಇಂದು ಕೂಡಾ ಗೊಬ್ಬರದ ಅಂಗಡಿಗಳ ಮುಂದೆ ಯೂರಿಯಾಕ್ಕಾಗಿ ಸಾಲುಗಟ್ಟಿ ನಿಂತಿದ್ದಾರೆ. ಇದು ರೈತ ವಿರೋಧಿ ಸರ್ಕಾರ, ರೈತರ ಬಗ್ಗೆ‌ ಕಾಳಜಿ ಇಲ್ಲ. ರೈತರ ಮಕ್ಕಳಿಗಾಗಿ ಜಾರಿಗೆ ತಂದ ವಿದ್ಯಾಸಿರಿ ವಿದ್ಯಾರ್ಥಿ ವೇತನ, ಹಾಲು ಉತ್ಪಾದಕ ರೈತರಿಗೆ ಹಣ ನೀಡಿಲ್ಲ, ನಾಲ್ಕು ಸಾವಿರ ರೂ.ನಂತೆ ದೊರೆಯುತ್ತಿದ್ದ ರೈತರ ಪ್ರೋತ್ಸಾಹ ಧನ ನೀಡುವ ಯೋಜನೆ ಕೂಡಾ ಸಿದ್ದರಾಮಯ್ಯ ನಿಲ್ಲಿಸಿದ್ದಾರೆ ಇದು ಅಪ್ಪಟ ರೈತ ವಿರೋಧಿ ಸರ್ಕಾರ ಎಂದು ನವೀನ್ ಕೆಂಡಕಾರಿದರು.

ಸಂಕಷ್ಟದ ಸಂದರ್ಭದಲ್ಕಿ ರೈತರು ದೃತಿಗೆಡದೆ ನಿಮ್ಮ ಬಳಿ ಇರುವ ಪರ್ಯಾಯ ಅಂದರೆ ದನ, ಕುರಿ, ಮೇಕೆ ಇತರೆ ಗೊಬ್ಬರಗಳನ್ನು ಬಳಕೆ ಮಾಡಿಕೊಳ್ಳುವಂತೆ ಅವರು ಮನವಿ ಮಾಡಿದರು.

ಜಿಲ್ಲೆ ಸೇರಿದಂತೆ ಎಲ್ಲಿಯಾದರೂ ಯೂರಿಯಾ ಗೊಬ್ಬರ ಅಕ್ರಮ‌ ದಾಸ್ತಾನು ಮಾಡಿದ್ದರೆ‌ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ಮನೆಯಲ್ಲಿ ಕೂರದೆ ರೈತರ ಜಮೀನುಗಳಿಗೆ ಭೇಟಿ‌ ನೀಡಬೇಕು ಎಂದು ತಾಕೀತು ಮಾಡಿದರು.

ಅಧಿಕಾರಿಗಳು ರೈತ ವಿರೋಧಿ ಧೋರಣೆ ಮುಂದುವರೆದರೆ ಕೃಷಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ನವೀನ್ ಎಚ್ಚರಿಸಿದರು.

ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದಸಂಪತ್ ಕುಮಾರ್, ಮಲ್ಲಿಕಾರ್ಜುನ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ಜಿಲ್ಲೆ ಬಿಜೆಪಿ ಖಜಾಂಚಿ ಮಾಧುರಿ‌ ಗಿರೀಶ್, ಮೋಹನ್, ವಕ್ತಾರ ನಾಗರಾಜ್ ಬೇದ್ರೆ ಮತ್ತಿತರರು ಇದ್ದರು.

 

Share This Article
error: Content is protected !!
";