ಸಂವಿಧಾನ ಮನನ ಮಾಡಿಕೊಳ್ಳದಿದ್ದರೆ ಉದ್ದೇಶ ಜಾರಿ ಮಾಡಲು ಸಾಧ್ಯವಿಲ್ಲ-ಸಿಎಂ

News Desk

ಸಂವಿಧಾನ ಮನನ ಮಾಡಿಕೊಳ್ಳದಿದ್ದರೆ ಉದ್ದೇಶ ಜಾರಿ ಮಾಡಲು ಸಾಧ್ಯವಿಲ್ಲ-ಸಿಎಂ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

- Advertisement - 

ಪ್ರತಿಯೊಬ್ಬ ಅಧಿಕಾರಿಯೂ ಸಂವಿಧಾನವನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕು.‌ ಇಲ್ಲದಿದ್ದರೆ ಸಂವಿಧಾನದ ಉದ್ದೇಶ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

- Advertisement - 

ಭಾರತೀಯ ಸಾರ್ವಜನಿಕ‌ ಆಡಳಿತ ಸಂಸ್ಥೆ, ಮೈಸೂರು ಆಡಳಿತ ತರಬೇತಿ ಸಂಸ್ಥೆ, ಐಐಪಿಐ ಸಂಯುಕ್ತಾಶ್ರಯದಲ್ಲಿ ಕೆ.ಎ.ಎಸ್ ತಾಲೂಕು ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಮಾತನಾಡಿದರು.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ಮೂಲ ಆಶಯ. ಸಂವಿಧಾನ ಜಾರಿಯಾಗಿ 75 ವರ್ಷ ಆಗಿದೆ. ಸ್ವಾತಂತ್ರ್ಯ ಬಂದು 78 ವರ್ಷ ಆಗುತ್ತಿದೆ. ಆದರೂ ಸಂವಿಧಾನದ ಧ್ಯೇಯೋದ್ದೇಶಗಳು ಇನ್ನೂ ಜಾರಿಯಾಗಿಲ್ಲ. ಸಮಾನ ಅವಕಾಶಗಳು ಇನ್ನೂ ಸಿಕ್ಕಿಲ್ಲ. ಸಮಾನತೆ, ಭ್ರಾತೃತ್ವ ನೆಲೆಸಿಲ್ಲ. ಏಕೆ ಎನ್ನುವುದನ್ನು ನಾವು ಪ್ರಶ್ನಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಅವರು ಸೂಚನೆ ನೀಡಿದರು.

- Advertisement - 

ಕೆಎಎಸ್ ಅಧಿಕಾರಿಗಳು ಎಂದರೆ ಬುದ್ದಿವಂತರು ಎನ್ನುವ ನಂಬಿಕೆ ಇದೆ. ನಿಮ್ಮಲ್ಲಿ ಎಷ್ಟು ಮಂದಿಗೆ ವೈಚಾರಿಕತೆ ಇದೆ. ನಿಮ್ಮಲ್ಲಿ ಎಷ್ಟು ಮಂದಿ ವೈಜ್ಞಾನಿಕ‌ ಮನೋಭಾವ ಬೆಳೆಸಿಕೊಂಡಿದ್ದೀರಿ ಎನ್ನುವುದನ್ನು ಆತ್ಮವಂಚನೆ ಮಾಡಿಕೊಳ್ಳದೆ, ಆತ್ಮವಿಮರ್ಷೆ ಮಾಡಿಕೊಳ್ಳಬೇಕು. ವಿದ್ಯಾವಂತರೂ ಕೂಡ ಹಣೆಬರಹ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರಿದ್ದಾರೆ. ದೇವರು ಹಾಗೆಲ್ಲಾ ತಾರತಮ್ಯ ಮಾಡಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನರ ಬಳಿ ಹೋಗಿ ರಿನೀವಲ್ ಮಾಡಿಕೊಳ್ಳಬೇಕು. ಆದರೆ ಅಧಿಕಾರಿಗಳಿಗೆ ಈ ಪರಿಸ್ಥಿತಿ ಇಲ್ಲ. ಹೀಗಾಗಿ ನಿಮ್ಮಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸರ್ಕಾರ ರೂಪಿಸುವ ಜನಪರವಾದ ಕಾರ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅವರು ತಿಳಿಸಿದರು.

ನಮಗಿಂತ ಬುದ್ದಿವಂತರು ಸಮಾಜದಲ್ಲಿ ಇರ್ತಾರೆ. ರೈತರು ಅವರ ಕ್ಷೇತ್ರದಲ್ಲಿ ನಮಗಿಂತ ಬುದ್ದಿವಂತರು. ಅವಕಾಶ ಇಲ್ಲದ ಬಹಳ ಮಂದಿ ಬುದ್ದಿವಂತರು ಸಮಾಜದಲ್ಲಿ ತುಂಬಿದ್ದಾರೆ. ಅವರಿಗೆ ಅವಕಾಶ ಸಿಕ್ಕಾಗ ಶೋಷಣೆಗೆ ಅವಕಾಶ ಇರುವುದಿಲ್ಲ.

ಸಂವಿಧಾನದ ಆಶಯಗಳು ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ಸರಿಯಾಗಿ ನಿರ್ವಹಿಸೋಣ, ಕರ್ತವ್ಯಲೋಪ ಆಗುವುದು ಬೇಡ. ಕೇವಲ ಅಪ್ಪ ಅಮ್ಮ ಖರ್ಚು ಮಾಡುವ ಹಣದಲ್ಲಿ ನೀವು ಅಧಿಕಾರಿಗಳಾಗಲು, ನಾವು ಶಾಸಕರು, ಸಚಿವರು ಆಗಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಋಣ ನಮ್ಮ ಮೇಲಿದೆ. ಇದನ್ನು ಮರೆಯಬಾರದು ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

 

Share This Article
error: Content is protected !!
";