ಚಂದ್ರವಳ್ಳಿ ನ್ಯೂಸ್, ಮೈಸೂರು:
ವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
6ನೇ ಬಾರಿ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಸಾಗಿದ್ದು, ಮಾವುತ ವಸಂತ ಆನೆಯನ್ನ ಮುನ್ನಡೆಸಿದ್ದಾರೆ. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಕಾವೇರಿ, ರೂಪಾ ಸಾಥ್ ನೀಡಿವೆ.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಮೇಲೆ ಚಿನ್ನದ ಅಂಬಾರಿಯಲ್ಲಿ ಕೂತಿದ್ದ ತಾಯಿ ಚಾಮುಂಡೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು.

ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಜೆ 4.42 ರಿಂದ 5.06 ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ,
ಶಿವರಾಜ ಎಸ್.ತಂಗಡಗಿ, ಯದುವಂಶಸ್ಥ, ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೇರಿದಂತೆ ಮತ್ತಿತರರು ಪುಷ್ಪಾರ್ಚನೆ ಮಾಡಿದರು.
ಗಣ್ಯರು ಪುಷ್ಪಾರ್ಚನೆ ಮಾಡಿದ ನಂತರ ಕ್ಯಾಪ್ಟನ್ ಅಭಿಮನ್ಯು, ಚಿನ್ನದ ಅಂಬಾರಿ ಹೊತ್ತು ಸಾಗಿದ.
ಕ್ಯಾಪ್ಟನ್ ಅಭಿಮನ್ಯು ಆನೆ ಅರಮನೆ ಬಳಿಯಿಂದ ಚಿನ್ನದ ಅಂಬಾರಿಯನ್ನು ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ,
ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಿತು. ಜಂಬೂ ಸವಾರಿಗೆ ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಾಥ್ ನೀಡುವ ಮೂಲಕ ಮೆರವಣಿಗೆಯನ್ನು ಮತ್ತಷ್ಟು ಮೆರುಗುಗೊಳಿವೆ. ಜಂಬೂ ಸವಾರಿಯೊಂದಿಗೆ 11 ದಿನಗಳ ದಸರಾ ವೈಭವಕ್ಕೆ ತೆರೆ ಬಿದ್ದಿತು.

