ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹುಚ್ಚು ಪ್ರಚಾರ ಪಡೆಯುವ ಗೀಳು 11ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ ಎಂದು ಜೆಡಿಎಸ್ ಆರೋಪಿಸಿದೆ.
ಅಧಿಕಾರದ ಅಮಲಿನಲ್ಲಿರುವ ಪ್ರಚಾರಪ್ರಿಯ, ಜಾಹೀರಾತು ಪ್ರಿಯ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಲ್ಲಿ ರಾರಾಜಿಸಲು ಹೋಗಿ ಮುಗ್ಧ ಜನರ ಜೀವದ ಜೊತೆ ಚಲ್ಲಾಟವಾಡಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ವಿಜಯದ ಪರೇಡ್‌ಗಳನ್ನು ಆಚರಿಸುವ ಸಮಯದಲ್ಲಿ ಸರಿಯಾದ ನಾಗರಿಕರ ಸುರಕ್ಷತಾ ಕ್ರಮಗಳನ್ನು, ಪೊಲೀಸ್ ಭದ್ರತಾ ವ್ಯವಸ್ಥೆ ಮತ್ತು ಜನಸಂದಣಿ ನಿರ್ವಹಣೆಯೊಂದಿಗೆ ಯೋಜಿಸಬೇಕು, ರಾಜಕೀಯ ಲಾಭಕ್ಕಾಗಿ ಆತುರಪಡಬಾರದು ಎಂಬುದಕ್ಕೆ ಕಾಲ್ತುಳಿತ ದುರಂತವೇ ಸಾಕ್ಷಿ ಎಂದು ಜೆಡಿಎಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಈ ಹಿಂದೆ ಐಪಿಎಲ್ ಕಪ್ ಗೆದ್ದ ರಾಜ್ಯಗಳು ಎರಡು ಮೂರು ದಿನಗಳ ನಂತರ ವಿಜಯ ಪರೇಡ್ ನಡೆಸಿವೆ.
ಕೆಕೆಆರ್ 2 ದಿನಗಳ ನಂತರ ಕೊಲ್ಕತ್ತಾದಲ್ಲಿ ವಿಜಯ ಪರೇಡ್ ನಡೆಸಿತು. ಮುಂಬೈ 2 ದಿನಗಳ ಬಳಿಕ ವಿಜಯೋತ್ಸವ ಮೆರವಣಿಗೆ ಆಯೋಜಿಸಿತು. ಸಿಎಸ್‌ಕೆ 3 ದಿನಗಳ ನಂತರ ವಿಜಯದ ಪರೇಡ್ ನಡೆಸಿತು.
ಭಾರತ ತಂಡ 5 ದಿನಗಳ ನಂತರ ತಮ್ಮ ಟಿ –20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ನಡೆಸಿತು ಎಂದು ಜೆಡಿಎಸ್ ತಿಳಿಸಿದೆ.
ಲಕ್ಷಾಂತರ ಜನ ಸೇರುವ ಕ್ರೀಡಾಂಗಣದ ಬಳಿ ಆಗಿರುವ ಭದ್ರತಾ ಲೋಪಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ನೈತಿಕ ಹೊಣೆಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.