ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬೆದರಿಕೆ ಮೇಲ್ ಒಂದು ಬಂದಿದ್ದು ಪೊಲೀಸರು ಇ-ಮೇಲ್ ಕಳುಹಿಸಿದ ವ್ಯಕ್ತಿಗಾಗಿ ಹುಡುಕಾಟ ಆರಂಭಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೊಲ್ಲುವುದಾಗಿ ಕಿಡಿಗೇಡಿಯೊಬ್ಬ ಇ–ಮೇಲ್ ಕಳುಹಿಸಿ ಬೆದರಿಕೆ ಹಾಕಿರುವ ಘಟನೆ ಜರುಗಿದೆ.
ಕಿಡಿಗೇಡಿ ಕಳುಹಿಸಿರುವ ಇಮೇಲ್ ನಲ್ಲಿ ಸಿಎಂ, ಡಿಸಿಎಂ ಇಬ್ಬರನ್ನೂ ಕೊಲೆ ಮಾಡಿ ಫ್ರಿಜ್ ಮತ್ತು ಟ್ರ್ಯಾಲಿ ಬ್ಯಾಗ್‌ಗೆ ತುಂಬುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂದೇಶ ಆಧರಿಸಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಿಂಧಾರ್ ರಜಪೂತ್ ಹೆಸರಿನ ಇ–ಮೇಲ್ನಿಂದ ಈ ಕೊಲೆ ಬೆದರಿಕೆ ಸಂದೇಶ ಬಂದಿದೆ ಎಂಬುದು ಪ್ರಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಬೆದರಿಕೆಯ ಇ–ಮೇಲ್ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವರು, ನಗರ ಪೊಲೀಸ್ ಕಮಿಷನರ್‌ಗೂ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ಕೋಟಿ ಸಾಲವನ್ನ ರಾಮಪುರ ಪ್ರಭಾಕರ್ಗೆ ಕೊಟ್ಟಿದ್ದೇನೆ. ಆತ ಸಾಲ ವಾಪಸ್ ಕೊಟ್ಟಿಲ್ಲ. ಪ್ರಭಾಕರ್ಗೆ ಬೇಗ ಸಾಲ ವಾಪಸ್ ಕೊಡೋಕೆ ಹೇಳಿ. ಆ ಪ್ರಭಾಕರ್ ಹಣವನ್ನು ತನ್ನ ನಾದಿನಿ ಹಾಗೂ ಪೋಷಕರ ಮನೆಯಲ್ಲಿ ಇಟ್ಟಿದ್ದಾನೆ ಎಂದು ಬರೆಯಲಾಗಿದೆ.
ಪ್ರಭಾಕರ್ ಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಒಬ್ಬ ಮಗನಿಗೆ ಮದುವೆ ಮಾಡಿದ್ದಾನೆ. ಸಾಲದ ಹಣವನ್ನು ವಾಪಸ್ ನೀಡಲು ಆತನಿಗೆ ಆದಾಯ ಮೂಲ ಇಲ್ಲ. ಹೀಗಾಗಿ ಪ್ರಭಾಕರ್ ನ ಕೊಲೆ ಮಾಡುತ್ತೀನಿ. ನೀವು ಹಣ ಕೊಡಿಸಿಲ್ಲ ಅಂದ್ರೆ ನಿಮ್ಮನ್ನು ಕೊಲೆ ಮಾಡುತ್ತೀನಿ ಅಂತ ಇಮೇಲ್ ನಲ್ಲಿ ಕಿಡಿಗೇಡಿ ವಿವರಿಸಿದ್ದಾನೆ.
ಇ ಮೇಲ್ ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಸಿಂದಾರ್ ರಜಪೂತ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ.