ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ 2025-26 ನೇ ಸಾಲಿನ ಆಯವ್ಯಯ( ಬಜೆಟ್ ) ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡ ಕೆ.ಸಿ.ಹೊರಕೇರಪ್ಪ ಮಾತನಾಡಿ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡುವಂತೆ ಮನವಿ ಮಾಡಿ ಒತ್ತಾಯಿಸಿದ್ದಾರೆ.
ಮಧ್ಯ ಕರ್ನಾಟಕ, ಬಯಲು ಸೀಮೆಯ ಎರಡು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಹೆದ್ದಾರಿ ಮಧ್ಯಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿರುವ ಬೃಹತ್ ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆ 2004ರಲ್ಲಿ ಸಮಾಪನಗೊಂಡಿದ್ದು ಪುನರ್ ಆರಂಭಿಸುವಂತೆ ಈ ಸಾಲಿನ ಆಯ-ವ್ಯಯ ಮುಂಗಡಪತ್ರದಲ್ಲಿ ಹಣ ಮೀಸಲಿಡುವಂತೆ ಅಥವಾ ಸಕ್ಕರೆ ಕಾರ್ಖಾನೆ ನಡೆಸಲು ಮುಂದಾಗುವ ಖಾಸಗಿ ಕಂಪನಿಗಳಿಗಾದರೂ ನೀಡಿ ಆಧುನಿಕ ತಂತ್ರಜ್ಞಾನದೊಂದಿಗೆ ನೂತನವಾಗಿ ಕಾರ್ಖಾನೆ ನಿರ್ಮಿಸಿ ಪ್ರಾರಂಭಿಸುವಂತೆ ಮನವಿ ಮಾಡಿದರು,
ಭದ್ರಾ ಮೇಲ್ದಂಡೆ ಯೋಜನೆ ಮುಖಾಂತರ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಹಾಲಿ ವಿವಿ ಸಾಗರ ಜಲಾಶಯದಲ್ಲಿ 30 ಟಿಎಂಸಿ ಅಡಿಗಳಷ್ಟು ನೀರು ತುಂಬಿದ್ದು ವೇದಾವತಿ ನದಿ ಪಾತ್ರಗಳಲ್ಲಿ ಅಂತರ್ಜಲ ಅಭಿವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದ್ದು ರೈತರು ಕಬ್ಬು ಬೆಳೆಯಲು ಉತ್ಸುಕರಿರುತ್ತಾರೆ. ಸರ್ಕಾರ ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸುವುದರ ಮೂಲಕ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವಂತೆ ಸಿಎಂಗೆ ಹೊರಕೇರಪ್ಪ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಚಿವ ಚೆಲುವರಾಯ ಸ್ವಾಮಿ, ಸಹಕಾರ ಸಚಿವ ಕೆ ಎನ್ ರಾಜಣ್ಣ, ಪಶು ಸಂಗೋಪನ ಸಚಿವ ಡಾ. ವೆಂಕಟೇಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷೆ ಮಂಜುಳಾ ಹಕ್ಕಿ, ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ. ಸಿ. ಹೊರಕೇರಪ್ಪ ಇತರೆ ಅನೇಕ ರೈತ ಮುಖಂಡರುಗಳು ಉಪಸ್ಥಿತರಿದ್ದರು.