ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದಿಂದ ಬದುಕಿರುವುದು. ನೋಟು ಅಮಾನ್ಯೀಕರಣದಿಂದ ಯಾರಿಗೆ ಅನುಕೂಲವಾಗಿದೆ? ಅಚ್ಚೆ ದಿನ್ ಆಯೇಗಾ ಎಂದರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು, ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದರು, ಇವೆಲ್ಲಾ ಆಗಿದೆಯಾ? ಕೊನೆಗೆ ಕೇಂದ್ರ ಸರ್ಕಾರದ ವಿರುದ್ಧ ರೈತರೇ ಒಂದು ವರ್ಷ ಕಾಲ ಚಳುವಳಿಯನ್ನು ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ಮಾಡಿದರು.
ಮೋದಿಯವರು ಪ್ರಮುಖವಾಗಿ ಏನು ಹೇಳಿದ್ದರೋ ಅದನ್ನೇ ಮಾಡಿಲ್ಲ. ತಮ್ಮ ಸರ್ಕಾರಕ್ಕೆ ಹನ್ನೊಂದು ವರ್ಷ ತುಂಬಿಸಿದ್ದಾರೆ ಅಷ್ಟೇ. ಮಾಧ್ಯಮಗಳು ಅವರಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಅವುಗಳ ಮೂಲಕ ಸುಳ್ಳು ವಿಚಾರಗಳಿಗೆ ಅವರು ಪ್ರಚಾರ ನೀಡುತ್ತಿದ್ದಾರೆ.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಇದನ್ನು ಅನುಷ್ಠಾನ ಮಾಡಲಾಗುವುದಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದವರು ಅದನ್ನೇ ನಕಲು ಮಾಡಿ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ಜಾರಿ ಮಾಡಿದರು.
ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶೇ.50ರಷ್ಟು ತೆರಿಗೆ ಹಂಚಿಕೆ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಅವರೇ ಪ್ರಧಾನಿಗಳಾದಾಗ ಏನು ಮಾಡಿದರು? ನಿರ್ಮಲಾ ಸೀತಾರಾಮನ್ ಅವರು 5,300 ಕೋಟಿಗಳನ್ನು ರಾಜ್ಯಕ್ಕೆ ಕೊಡುವುದಾಗಿ ಘೋಷಿಸಿ ಕೊಡಲಿಲ್ಲ.
15ನೇ ಹಣಕಾಸು ಆಯೋಗದವರು ಕರ್ನಾಟಕಕ್ಕೆ 11,495 ಕೋಟಿ ಕೊಡಬೇಕು ಎಂದು ಶಿಫಾರಸ್ಸು ಮಾಡಿದರೂ ಕೊಡಲಿಲ್ಲ. ಕರ್ನಾಟಕ ಬಿಜೆಪಿ ಅವರು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು, ಅಪಪ್ರಚಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.