ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಹಲ್ಗಾಮ್ನಲ್ಲಿ ನಡೆದ ಉಗ್ರ ಕೃತ್ಯ ಸಂಬಂಧ ಪಾಕಿಸ್ತಾನದ ವಿರುದ್ಧ ಕೇಂದ್ರವು ಬಿಗಿ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಯಾವ ಕ್ಷಣದಲ್ಲಾದರೂ ಯುದ್ಧದ ಸನ್ನಿವೇಶ ಎದುರಾಗಬಹುದು. ಈ ಬೆಳವಣಿಗೆ ಮಧ್ಯೆ ಸಿದ್ದರಾಮಯ್ಯ ಅವರು ಯುದ್ಧ ಬೇಡವೆಂದು ಹೇಳಿಕೆ ನೀಡಿದ್ದರಿಂದ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.
ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯನವರು ಹೇಳಿಕೆ ಪಾಕಿಸ್ತಾನ ಮೀಡಿಯಾಗಳು ಮಾಡಿರುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.
ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯಿಸಿ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ. ಯುದ್ಧ ಅನಿವಾರ್ಯವಾದರೆ ಮಾತ್ರ ಯುದ್ಧ ಮಾಡಬೇಕು. ಯುದ್ಧದಿಂದಲೇ ಪರಿಹಾರ ಅಲ್ಲ, ಯುದ್ಧವೇ ಬೇಡವೇ ಬೇಡ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಮಾತನಾಡಿದ್ದ ಸಿಎಂ, ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಭದ್ರತೆ ಹೆಚ್ಚಿಸಬೇಕು ಎಂದಿದ್ದರು. ಈ ಹೇಳಿಕೆಯು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಸಿದ್ದರಾಮಯ್ಯ ಅವರು ಮಾತನಾಡಿ, ಯುದ್ಧ ಅನಿವಾರ್ಯವಾದಾಗ ಮಾತ್ರ ಮಾಡಬೇಕು. ಯುದ್ಧದಿಂದ ಪರಿಹಾರವಾಗಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಯ ವೈಫಲ್ಯ ಇದೆ ಎಂದು ಹೇಳಿದ್ದೇನೆ. 26 ಜನ ಪ್ರವಾಸಿಗರು ಉಗ್ರರ ದಾಳಿಯಲ್ಲಿ ಅಸುನೀಗಿದ್ದಾರೆ. ಹಿಂದೆ ಪುಲ್ವಾಮಾ ದಾಳಿಯಲ್ಲಿ ಸೈನಿಕರು ಹುತಾತ್ಮರಾಗಿದ್ದರು. ಕೇಂದ್ರ ಸರ್ಕಾರ ಭದ್ರತೆಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿರಲಿಲ್ಲ. ತಕ್ಷಣಕ್ಕೆ ಯುದ್ಧ ಬೇಡ. ಆದರೆ ಯುದ್ಧ ಮಾಡಲೇಬಾರದು ಎಂದು ಹೇಳಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.