ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿರುವುದು ವಿಜಯನಗರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಉಪವಿಭಾಗದ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್, ಹೂವಿನ ಹಡಗಲಿ ಪೊಲೀಸ್ ಠಾಣೆಯ ಸಿಪಿಐ ದೀಪಕ್ ಬೂಸರೆಡ್ಡಿ, ಹೊಸಪೇಟೆಯ ಟಿಬಿ ಡ್ಯಾಂ ಪೊಲೀಸ್ ಠಾಣೆಯ ಪಿಎಸ್ಐ ಕೊದಂಡಪಾಣಿ ಹಾಗೂ ಹರಪನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಆನಂದ್ ಅವರಿಗೆ ಈ ಬಾರಿ ಸಿಎಂ ಚಿನ್ನದ ಪದಕ ಘೋಷಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ಜನಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಗೌರವ ನೀಡಿದೆ ಎಂದು ತಿಳಿದುಬಂದಿದೆ. ಚಿನ್ನದ ಪದಕ ಪಡೆದ ಈ ನಾಲ್ವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಜಿಲ್ಲೆಯ ಪೊಲೀಸ್ ವಲಯದಲ್ಲಿ ಈ ಸಾಧನೆಗೆ ಸಂತಸ ವ್ಯಕ್ತವಾಗಿದ್ದು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

