ಎಲ್ಲ ಶಾಸಕರಿಗೆ ತಲಾ 10 ಕೋಟಿ ರೂ ಅನುದಾನ-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದ ಖಾಸಗಿ ಹೊಟೇಲ್​​ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹಲವು ಕೈ ಶಾಸಕರು ಅನುದಾನ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ ಪ್ರಸಂಗ ನಡಿದಿದೆ.
ತಾವುಗಳು ಸ್ಪರ್ಧಿಸಿ ಜನರಿಗೆ ಭರವಸೆ ನೀಡಿರುವ ಕ್ಷೇತ್ರದಲ್ಲಿ‌ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಹೀಗಾಗಿ
, ಅನುದಾನ ನೀಡಬೇಕು ಎಂದು ಕೆಲ ಶಾಸಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದರು ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಬಜೆಟ್​​ನಲ್ಲಿ ಹೆಚ್ಚಿನ ಅನುದಾನವನ್ನು ಶಾಸಕರುಗಳಿಗೆ ಒದಗಿಸುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ರಾಜ್ಯ ಸರ್ಕಾರ ಸ್ಥಿರವಾಗಿದೆ
, ಸಂಪನ್ಮೂಲ ಕ್ರೋಢೀಕರಣ ಆಗುತ್ತಿದೆ. ಎಲ್ಲ ಶಾಸಕರಿಗೆ ತಲಾ 10 ಕೋಟಿ ರೂ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು. ಮೊನ್ನೆಯಷ್ಟೇ ಅನುದಾನಕ್ಕೆ ಸಹಿ ಹಾಕಿದ್ದೇನೆ. ಎಲ್ಲಾ ಪಕ್ಷದವರಿಗೂ ಅನುದಾನ ನೀಡುತ್ತಿದ್ದೇವೆ. ಬಿಜೆಪಿ, ಜೆಡಿಎಸ್ ಶಾಸಕರಿಗೂ ಹತ್ತು ಕೋಟಿ ಕೊಡುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.

ಸುರ್ಜೇವಾಲ ತಾಕೀತು: ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರು ಕೈ ಶಾಸಕರು, ಸಚಿವರಿಗೆ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದರು. ಏನೇ ಗೊಂದಲಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ, ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುವಂತೆ ಸೂಚಿಸಿದರು.
ಸುರ್ಜೆವಾಲ ಮಾತಿಗೆ ಸಿಎಂ ದನಿಗೂಡಿಸಿದರು. ಎಲ್ಲವೂ ಹೈಕಮಾಂಡ್​​ಗೆ ಬಿಟ್ಟ ವಿಚಾರ. ಅದರಂತೆ ಎಲ್ಲರೂ ನಡೆಯಬೇಕು ಎಂದು ಹೇಳಿದರು.

ವಾಕ್ಸಮರ: ಶಾಸಕಾಂಗ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡುವೆ ಬಿರುಸಿನ ವಾಕ್ಸಮರ ನಡೆದ ಘಟನೆ ಜರುಗಿದೆ.‌ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಡಿಸಿಸಿ ಕಚೇರಿ ಕಟ್ಟಿದ್ದಾರೆ ಎಂದು ಡಿಕೆಶಿ ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಸತೀಶ್ ಜಾರಕಿಹೊಳಿ, ಎದ್ದು ಬಂದು ಮೈಕ್ ಹಿಡಿದು ಪದೇ ಪದೇ ಲಕ್ಷ್ಮಿ ಹೆಬ್ಬಾಳ್ಕರ್ ಕಟ್ಟಿದ್ರು ಅಂತ ಹೇಳಬೇಡಿ. ಹೀಗೆ ಹೇಳಿ ಇತರರನ್ನು ಅವಮಾನಿಸಬೇಡಿ. ಡಿಸಿಸಿ ಕಚೇರಿ ಕಟ್ಟಡಕ್ಕೆ ನಾನೂ 3 ಕೋಟಿ ಹಣ ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿದ್ದರು ಎಂದು ತಿರುಗೇಟು ನೀಡಿದಾಗ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯ ಪ್ರವೇಶಿಸಿದ ಮಾತನಾಡಲು ಯತ್ನಿಸಿದರು. ಆದರೆ ಸುರ್ಜೇವಾಲ ಎಲ್ಲರನ್ನು ಸಮಾಧಾನಪಡಿಸಿ ಮುಜುಗರ ತಪ್ಪಿಸಿದರು.

ಜಾರಕಿಹೊಳಿ-ಹೆಬ್ಬಾಳ್ಕರ್ ವಾಗ್ವಾದ:
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ನಡುವೆ ಡಿಸಿಸಿ ವಿಚಾರವಾಗಿ ವಾಗ್ವಾದ ನಡೆಯಿತು. ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡುತ್ತಾ
, ಹಲವು ವರ್ಷಗಳಿಂದ ಉಸ್ತುವಾರಿ ಸಚಿವರಾಗಿದ್ರೂ ಪಕ್ಷದ ಕಚೇರಿ ಜಿಲ್ಲೆಯಲ್ಲಿ ಇರಲಿಲ್ಲ. ನಾನು ಮೊದಲ ಬಾರಿ ಸಚಿವೆಯಾಗಿ, ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಪಕ್ಷದ ಕಚೇರಿ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಿದ್ದಂತೆ, ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡರು. ನಾನು ಜಾಗ ಕೊಟ್ಟಿದ್ದು, ನಂತರ ಪಕ್ಷದ ಕಚೇರಿ ನಿರ್ಮಾಣವಾಗಿದ್ದು ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಸದ್ಯ ಪಕ್ಷದ ಕಚೇರಿ ಆಯ್ತಲ್ಲ ಬಿಡಿ, ಈ ಬಗ್ಗೆ ಚರ್ಚೆ ಬೇಡ ಎಂದು ಹೇಳಿದರು. ಆಗ ವಾಗ್ವಾದಕ್ಕೆ ತೆರೆ ಬಿದ್ದಿತು.

 

- Advertisement -  - Advertisement - 
Share This Article
error: Content is protected !!
";