ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಿದ್ದರಾಮಯ್ಯ ಅವರೇ, ಅಸಮಾನತೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಇದೆಯೇ? ಬೇರೆ ಧರ್ಮಗಳಲ್ಲಿಯೂ “ಅಸಮಾನತೆ ಇದೆ” ಎಂದು ಹೇಳಲು ನಿಮಗೆ ನಾಲಿಗೆ ಹೊರಳುವುದಿಲ್ಲವೇ ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹರಿಹಾಯ್ದರು.
ರಾಜಕೀಯ ಲಾಭಕ್ಕಾಗಿ ಸದಾ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಕಿಚ್ಚು ಹಚ್ಚುವ ದುರ್ಬುದ್ಧಿಯನ್ನು ಬಿಡಿ. ಹಿಂದೂ ಸಮಾಜವನ್ನು ವಿಭಜಿಸಲು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ.
ನಾನೂ ಕೂಡ ಹಿಂದೂ ಎಂದು ಹೇಳುವ ನೀವು, “ಹಿಂದೂ ಸಮಾಜದಲ್ಲಿ ಸಮಾನತೆ ಇಲ್ಲ” ಎಂದು ಢೋಂಗಿ ಮಾತುಗಳನ್ನು ಆಡುವುದು ಯಾರನ್ನು ಓಲೈಸುವುದಕ್ಕಾಗಿ ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷದಲ್ಲಿ 55 ವರ್ಷಕ್ಕೂ ಹೆಚ್ಚು ಕಾಲ ಭಾರತೀಯ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ. “ಅಸಮಾನತೆಯ ನಿಜವಾದ ಪೋಷಕ ಕಾಂಗ್ರೆಸ್” ಪಕ್ಷವೇ ಆಗಿದೆ ಎಂದು ಅಶೋಕ್ ಆರೋಪಿಸಿದರು.

