ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡ ಹಬ್ಬ ದಸರಾ ವೇದಿಕೆಯಲ್ಲಿ ವಂಚನೆ, ಸುಲಿಗೆ ಸೇರಿ 11 ಪ್ರಕರಣಗಳನ್ನು ಎದುರಿಸುತ್ತಿರುವ ಪ್ರಕಾಶ್ ಮುಧೋಳ ಎಂಬ ರೌಡಿ ಶೀಟರ್ ಓರ್ವನನ್ನು ವೇದಿಕೆಯ ಗಣ್ಯರ ಸಾಲಿನಲ್ಲಿ ಕುಳ್ಳಿರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ನಾಡಹಬ್ಬದ ಘನತೆಗೆ ಕಪ್ಪು ಮಸಿ ಬಳಿದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿದ್ದ ಕಿಡಿಗೇಡಿಗಳ ಪ್ರಕರಣ ಹಿಂಪಡೆದಿದ್ದ ಕಾಂಗ್ರೆಸ್ ಸರ್ಕಾರ, ಈ ರೀತಿಯ ಅಪರಾಧ ಹಿನ್ನೆಲೆಯವರನ್ನು ಅಥಿತಿಗಳಾಗಿ ಗೌರವಿಸುತ್ತಿರುವುದು ದುರಂತದ ದೌರ್ಭಾಗ್ಯವೇ ಸರಿ ಎಂದು ಅವರು ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಸಚಿವರುಗಳು ಕುಳಿತಿದ್ದ ಸಾಲಿನಲ್ಲಿ ರೌಡಿ ಶೀಟರ್ ಪ್ರಕಾಶ್‌ಮುಧೋಳ ಎಂಬಾತನನ್ನು ಕುಳ್ಳಿರಿಸಿ ಈ ಸರ್ಕಾರ ನಾಡಿಗೆ ಯಾವ ಸಂದೇಶ ರವಾನಿಸಲು ಹೊರಟಿದೆ ಎಂಬುದನ್ನು ಸರ್ಕಾರವೇ ಸ್ಪಷ್ಟನೆ ನೀಡಬೇಕು ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.