ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಜನಾರ್ದನರೆಡ್ಡಿಗೆ ಏನು ನೈತಿಕತೆ ಇದೆ. ಲೂಟಿ ಮಾಡಿಯೇ ಜನಾರ್ದನ ರೆಡ್ಡಿ ಜೈಲಿಗೆ ಹೋಗಿದ್ದರಲ್ಲ. ಮತ್ತೆ ಬಳ್ಳಾರಿಗೆ ಬರಬೇಡಿ ಅಂತಾ ಅವರಿಗೆ ಯಾಕೆ ನಿರ್ಬಂಧ ವಿಧಿಸಲಾಗಿತ್ತು. ಈಗಲೂ ಕೂಡ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, 12 ಸಚಿವರು ಮತ್ತು ತಾವು ರಾಜ್ಯವನ್ನು ಲೂಟಿ ಮಾಡುತ್ತಿದ್ದೀರಿ ಎಂಬ ಶಾಸಕ ಜನಾರ್ದನ ರೆಡ್ಡಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿರೋಧ ಪಕ್ಷಗಳಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಸುಳ್ಳು ಆರೋಪದ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಈಗ ಅಧಿವೇಶನ ಶುರು ಆಗುತ್ತದೆ. ಆಗ ಮಾತನಾಡಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಗಡಿ ವಿಚಾರ: ಸುಪ್ರೀಂ ಕೋರ್ಟ್ ನಲ್ಲಿ ಜನವರಿ 21ರಂದು ಗಡಿ ವಿಚಾರಣೆ ಆರಂಭವಾಗುತ್ತಿದ್ದು ಒಳ್ಳೆಯ ವಕೀಲರನ್ನು ನೇಮಿಸುತ್ತೇವೆ ಎಂದು ಸಿಎಂ ತಿಳಿಸಿದರು.
ಕರ್ನಾಟಕ ವಿರುದ್ಧ ಗಡಿ ವಿಚಾರದಲ್ಲಿ ಪ್ರಕರಣ ಹಾಕಲು ಮಹಾರಾಷ್ಟ್ರದವರಿಗೆ ಅವಕಾಶವೇ ಇಲ್ಲ. ವ್ಯಾಪ್ತಿ ಮೇಲೆ ನಮ್ಮ ತಕರಾರು ಇದೆ. ಗಡಿ ವಿವಾದ ಇತ್ಯರ್ಥಪಡಿಸುವ ಅಧಿಕಾರ ಯಾರಿಗೆ ಎಂಬುದು ತೀರ್ಮಾನ ಆಗಬೇಕು. ನಾವು ನ್ಯಾಯಾಂಗ ಮಾರ್ಗದಲ್ಲಿ ಸಾಗುತ್ತೇವೆ. ಗಡಿ ವಿಚಾರಣೆ ನ್ಯಾಯಾಂಗದಲ್ಲಿ ಬರಬೇಕೋ, ಬರಬಾರದೋ ಎನ್ನುವುದು ಮೊದಲು ತೀರ್ಮಾನ ಆಗಬೇಕಿದೆ. ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದರು.
ಅರ್ಹ ಮತದಾರರು ಬಿಟ್ಟುಹೋಗಬಾರದು:
ಮತದಾರರ ಪಟ್ಟಿಯಲ್ಲಿ ಮೂರು ಕೋಟಿ ಜನರ ಹೆಸರು ಮಿಸ್ ಆಗಿರುವ ವಿಚಾರಕ್ಕೆ ಕಾಂಗ್ರೆಸ್ನಿಂದ ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದೇವೆ. ಎಸ್ಐಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಲು ಬಿಎಲ್ಎಗಳಿಗೆ ಸೂಚನೆ ನೀಡಿದ್ದೇವೆ. ಅದರಲ್ಲಿ ರಾಜಕೀಯ ಮಾಡಲ್ಲ. ನಿಜವಾದ ಮತದಾರರು ಬಿಟ್ಟುಹೋಗಬಾರದು ಎಂದು ಸಿದ್ದರಾಮಯ್ಯ ಹೇಳಿದರು.
ಗ್ರೇಟರ್ ಬೆಂಗಳೂರು ಚುನಾವಣೆ ಬ್ಯಾಲೆಟ್ ಪೇಪರ್ನಲ್ಲಿಯೇ ಮಾಡಬೇಕು ಎಂಬುದು ನಮ್ಮ ಬೇಡಿಕೆ ಆಗಿದೆ. ಅದರಲ್ಲಿ ನಾವು ರಾಜಕೀಯ ಮಾಡಲ್ಲ. ನಿಜವಾದ ಮತದಾರರು ಪಟ್ಟಿಯಿಂದ ಬಿಟ್ಟುಹೋಗಬಾರದು ಎಂದು ಸ್ಪಷ್ಟಪಡಿಸಿದ ಅವರು, ಕೆಲ ವಿಧೇಯಕಗಳ ಬಗ್ಗೆ ರಾಜ್ಯಪಾಲರು ಎತ್ತಿರುವ ಪ್ರಶ್ನೆಗಳಿಗೆ ವಿವರಣೆ ನೀಡುವ ಕೆಲಸವನ್ನು ಅಧಿವೇಶನದಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಅವರು ಮಾತನಾಡಿ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋಗಲು ತಿಂಗಳ ಅಂತ್ಯ ಅಂತ ಏನಿಲ್ಲ. ಹೈಕಮಾಂಡ್ ಯಾವಾಗ ಕರೆಯುತ್ತದೆಯೋ ಆವಾಗ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

