ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಹಿಂದ ವೇಷತೊಟ್ಟು ಐಷಾರಾಮಿ ಜೀವನ ನಡೆಸುವ ಶೋಕಿರಾಮಯ್ಯ! ಎಂದು ಜೆಡಿಎಸ್ ಟೀಕಿಸಿದೆ. ಸಿಎಂ ಅಧಿಕೃತ “ಕಾವೇರಿ” ವಸತಿಗೃಹವನ್ನು 2.65 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಮುಂದಾಗಿರುವ ಸಿದ್ದರಾಮಯ್ಯ ಅವರೇ, ಜನರು ಬೆವರು ಹರಿಸಿ ಕಟ್ಟಿದ ತೆರಿಗೆ ಹಣವನ್ನು ಈ ರೀತಿ ದುಂದುವೆಚ್ಚ ಮಾಡುವುದು ಯಾವ ರೀತಿಯ ಸಮಾಜವಾದ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
2023ರ ನವೆಂಬರ್‌ತಿಂಗಳಲ್ಲಿ ಕಾವೇರಿ ನಿವಾಸದ ವೈಭವಕ್ಕೆ ಬರೋಬ್ಬರಿ 3 ಕೋಟಿ ಖರ್ಚು ಮಾಡಿದ್ದೀರಿ. ಅಷ್ಟು ಸಾಲದು ಎಂಬಂತೇ, 3 ತಿಂಗಳ ಹಿಂದಷ್ಟೆ (2024- ನವೆಂಬರ್) ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯನ್ನು (323ನೇ ಕೊಠಡಿ) 2.5 ಕೋಟಿಗೂ ಹೆಚ್ಚು ವ್ಯಯಿಸಿ ಕಾರ್ಪೊರೇಟ್‌ಶೈಲಿಯಲ್ಲಿ ನವೀಕರಿಸಿಕೊಂಡು, ಕಾರ್ಪೊರೇಟ್‌ಸಿಎಂ ಆಗಿದ್ದೀರಿ ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.
ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಸತಿಗೃಹ ದುರಸ್ತಿಗೆ 1.38 ಕೋಟಿ ಖರ್ಚು ಮಾಡಲಾಗಿತ್ತು. ಈಗ ಡಿಸಿಎಂ ಡಿಕೆಶಿ ಅವರ ಆಪ್ತ ಕಾರ್ಯದರ್ಶಿ ಕೊಠಡಿ ನವೀಕರಣಕ್ಕೆ 45.10 ಲಕ್ಷ ವೆಚ್ಚ ಮಾಡಲು ಅನುಮತಿ ನೀಡಲಾಗಿದೆ.
ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ಸರಿಯಾಗಿ ದುರಸ್ತಿ ಮಾಡಲು ಯೋಗ್ಯತೆ ಇಲ್ಲದ ಸಿಎಂ, ಡಿಸಿಎಂ, ಜನರ ತೆರಿಗೆ ದುಡ್ಡಿನಲ್ಲಿ ಕರ್ನಾಟಕ ಕಾಂಗ್ರೆಸ್ ಜಾತ್ರೆ ! ನಾಚಿಕೆಯಾಗುವುದಿಲ್ಲವೇ ? ಎಂದು ಜೆಡಿಎಸ್ ಹರಿಹಾಯ್ದಿದೆ.
ಬೇಕಾಬಿಟ್ಟಿಯಾಗಿ ಸರ್ಕಾರಿ ನಿವಾಸ ಹಾಗೂ ಕಚೇರಿಯ ಐಷಾರಾಮಿ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡುತ್ತಿದ್ದೀರಲ್ಲ, ನಿಮಗೆ ಆತ್ಮಸಾಕ್ಷಿ ಚುಚ್ಚುವುದಿಲ್ಲವೇ ? ಎಂದು ಜೆಡಿಎಸ್ ಪ್ರಶ್ನಿಸಿದೆ.