ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೇಡಿಕೆಗಳನ್ನು ಈಡೇರಿಸಿ ಕೊಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು, ಸಂಘದ ಬೇಡಿಕೆಗಳ ಕುರಿತು ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿಯವರ ನೇತೃತ್ವದ ನಿಯೋಗದೊಂದಿಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಚರ್ಚಿಸಿದರು.
ಸಂಪಾದಕರ ಸಂಘದ ಪ್ರಮುಖ ಬೇಡಿಕೆಗಳಾದ ಕಳೆದ 5 ವರ್ಷಗಳಿಂದ ಬಾಕಿ ಉಳಿದ ಜಾಹೀರಾತು ದರ ಹೆಚ್ಚಳ, ಒಬಿಸಿ, ಬ್ರಾಹ್ಮಣ ಸಮುದಾಯದ 5 ವರ್ಷದೊಳಗಿನ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ, ಕಾನೂನು ಬಾಹಿರವಾಗಿ ಎಜೆನ್ಸಿಗಳು ಕಡಿತಗೊಳಿಸುವ ಕಮಿಷನ್ ನಿಲುಗಡೆ, ಕೆಕೆಆರ್ ಡಿಬಿಯಿಂದ ಪ್ರತಿ ಮಾಹೆ 2 ಪುಟಗಳ ಜಾಹೀರಾತು ಬಿಡುಗಡೆ ಬಗ್ಗೆ ಮಾಧ್ಯಮಸಲಹೆಗಾರರೊಂದಿಗೆ ಸವಿಸ್ತಾರವಾಗಿ ಚರ್ಚಿಸಲಾಯಿತು.
ಸಂಘದ ಎಲ್ಲಾ ಬೇಡಿಕೆಗಳ ಕುರಿತು ತಾಳ್ಮೆಯಿಂದ ಆಲಿಸಿದ ಕೆ.ವಿ.ಪ್ರಭಾಕರ್ ಅವರು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಶೀಘ್ರವೇ ಬೇಡಿಕೆ ಈಡೇರಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಪರಿಷ್ಕೃತ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿಯವರು ಗುರುವಾರ ಸದನದಲ್ಲಿ ಹೇಳಿದ್ದಾರೆ. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಮಾರಕವಾಗುವ ಯಾವುದೇ ನಿಯಮಗಳನ್ನು ಅಳವಡಿಸಬೇಡಿ. ಹಾಲಿ ಜಾಹೀರಾತು ನೀತಿಯಲ್ಲಿ ಯಾವ ಯಾವ ಸೌಲಭ್ಯಗಳನ್ನು ಪತ್ರಿಕೆಗಳಿಗೆ ನೀಡಲಾಗುತ್ತದೆಯೋ ಅವುಗಳನ್ನೆಲ್ಲ ಪರಿಷ್ಕೃತ ಜಾಹೀರಾತು ನೀತಿಯಲ್ಲಿ ಮುಂದುವರೆಸುವಂತೆ ನಿಯೋಗವು ಕೆ.ವಿ ಪ್ರಭಾಕರ್ ಅವರಿಗೆ ವಿನಂತಿಮಾಡಿತು.
ಸಂಘದ ಬೇಡಿಕೆಗಳಿಗೆ ಸ್ಪಂದಿಸದ ಅಧಿಕಾರಿಗಳು-
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ನ್ಯಾಯ ಒದಗಿಸಿ ಕೊಡುವಂತೆ ಜನವರಿ 2024ರ ಮಾಹೆಯಿಂದ ಇದುವರೆಗೆ ಅನೇಕ ಬಾರಿ ಮನವಿ ಪತ್ರಗಳನ್ನು ಮುಖ್ಯಮಂತ್ರಿಯವರಿಗೆ, ತಮಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ, ಇಲಾಖೆಯ ಆಯುಕ್ತರಿಗೆ ಸಲ್ಲಿಸಿ ವಿನಂತಿ ಮಾಡಲಾಗಿದೆ. ಹಲವು ಬಾರಿ ಸರ್ಕಾರದ ಕಾರ್ಯದರ್ಶಿಯವರನ್ನು ಮತ್ತು ಇಲಾಖೆ ಆಯುಕ್ತರನ್ನು ಸಂಘದ ಪದಾಧಿಕಾರಿಗಳು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿರುತ್ತೇವೆ. ಆದರೆ ಇದುವರೆಗೆ ಈ ಬೇಡಿಕೆಗಳ ಈಡೇರಿಸಲು ಈ ಅಧಿಕಾರಿಗಳು ಮುಂದಾಗಿರುವುದಿಲ್ಲ. ಇದರಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೆ.ವಿ.ಪ್ರಭಾಕರ್ ಅವರಿಗೆ ಸಂಘದ ನಿಯೋಗ ಮನವರಿಕೆ ಮಾಡಿಕೊಟ್ಟಿತು.
ಆದ್ದರಿಂದ ಸಂಘದ ಪ್ರಮುಖ 4 ಬೇಡಿಕೆಗಳನ್ನು ಈಡೇರಿಸಿ ಕೊಡುವುದರ ಮೂಲಕ ರಾಜ್ಯದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡುವಂತೆ ಮನವಿ ಸಲ್ಲಿಸಿ ಸಂಘದ ನಿಯೋಗ ವಿನಂತಿಸಿತು.
ಸಂಘದ ನಿಯೋಗದಲ್ಲಿ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ರಾಮಕೃಷ್ಣ ಮಾಮರ, ಹೆಚ್.ಎಸ್.ಹರೀಶ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಎಸ್.ಕೃಷ್ಣಮೂರ್ತಿ, ಖಜಾಂಚಿ ವೇದಮೂರ್ತಿ ಎಸ್.ಟಿ, ಸಂಘಟನಾ ಕಾರ್ಯದರ್ಶಿಗಳಾದ ಶಿವಶಂಕರ್. ಎಲ್, ಮಹಮ್ಮದ ಅಲ್ತಾಫ್ ಗೌಸಮೊದೀನ ಧಾರವಾಡ, ಬೀದರ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್, ಕೊಪ್ಪಳ ಜಿಲ್ಲಾಧ್ಯಕ್ಷ ಶ್ರೀನಿವಾಸ.ಎಂ.ಜೆ, ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿರೇಮಠ, ಮಂಡ್ಯ ನಾಗೇಶ್ ಸೇರಿದಂತೆ ಸಂಘದ ಜಿಲ್ಲಾ ಘಟಕಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಪ್ರಮುಖ ಬೇಡಿಕೆಗಳು-
1. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀತಿ 2013 ಅನುಷ್ಠಾನ ನಿಯಮಗಳು 2014 ರ ನಿಯಮ 14 ರ ಟಿಪ್ಪಣೆ 3 ರ ಪ್ರಕಾರ ದಿನಾಂಕ: 01-04-2023 ರಿಂದ ಅನ್ವಯವಾಗುವಂತೆ ಹಾಲಿ ಜಾಹೀರಾತು ದರಕ್ಕೆ ಶೇ. 12 ರಷ್ಟು ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕು. ದಿನಾಂಕ: 01-04-2025 ರಿಂದ ಅನ್ವಯವಾಗುವಂತೆ ಹಾಲಿ ಜಾಹೀರಾತು ದರಕ್ಕೆ ಮತ್ತೇ ಶೇ. 12 ರಷ್ಟು ಹೀಗೆ ಶೇ.24 ರಷ್ಟು ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕು.
- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅಂಗೀಕೃತ ಜಾಹೀರಾತು ಸಂಸ್ಥೆಗಳ ಮೂಲಕ ಬಿಡುಗಡೆ ಮಾಡಲಾಗುವ ಎಲ್ಲಾ ಬಗೆಯ ಜಾಹೀರಾತು ವೆಚ್ಚದ ಬಿಲ್ಲುಗಳಲ್ಲಿ ಸರ್ಕಾರದ ಯಾವುದೇ ಆದೇಶ ಇಲ್ಲದಿದ್ದರೂ ಸಹ ಕಾನೂನು ಬಾಹಿರವಾಗಿ ಐಎನ್ಎಸ್ ಪ್ರಕಾರ ಕಡಿತಗೊಳಿಸುತ್ತಿರುವ ಶೇ. 15 ರಷ್ಟು ಕಮಿಷನ್ ಹಣವನ್ನು ಕಡಿತಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಎಲ್ಲಾ ಬಗೆಯ ಜಾಹೀರಾತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದಲೇ ಬಿಡುಗಡೆ ಮಾಡಬೇಕು. ಖಾಸಗಿ ಜಾಹೀರಾತು ಏಜೆನ್ಸಿಗಳ ಕಮಿಷನ್ ಹಣವನ್ನು ಟೆಂಡರ್ ಮತ್ತು ವರ್ಗೀಕೃತ ಮತ್ತು ಆಕರ್ಷಕ ಜಾಹೀರಾತುಗಳನ್ನು ನೀಡುವ ಕಚೇರಿಗಳೇ ಅದರ ಶೇ.15 ರಷ್ಟು ಕಮಿಷನ್ ಹಣವನ್ನು ಪಾವತಿಸುವ ವ್ಯವಸ್ಥೆಯನ್ನು ಮಾಡಿ ಸರ್ಕಾರದಿಂದ ಆದೇಶ ಹೊರಡಿಸಬೇಕು.
- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ 5 ವರ್ಷ ಪೂರೈಸಿರುವ ಒಬಿಸಿ/ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಪ್ರತಿ ಮಾಹೆ 02 ಮಟಗಳ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಈ ಸಮುದಾಯದ ಪತ್ರಿಕೆಗಳ ಬೆಳವಣಿಗೆಗೆ ಸರ್ಕಾರವು ಸಹಾಯ, ಸಹಕಾರ ನೀಡುತ್ತಿದೆ. ಆದರೆ 5 ವರ್ಷ ಪೂರೈಸಿರದ ಒಬಿಸಿ /ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಪ್ರತಿ ಮಾಹೆ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತನ್ನು ಇಲಾಖೆಯಿಂದ ಬಿಡುಗಡೆ ಮಾಡುವುದಕ್ಕೆ ಸರ್ಕಾರದ ಆದೇಶ ಇರುವುದಿಲ್ಲ. ಹೀಗಾಗಿ ಈ ಸಮುದಾಯದ ಪತ್ರಿಕೆಗಳ ಬೆಳವಣಿಗೆಗೆ ಮತ್ತು ಪತ್ರಿಕೆ ನಡೆಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ತಳಹದಿಯಲ್ಲಿ ಈ ಎರಡು ಸಮುದಾಯದ ಪತ್ರಿಕೆಗಳಿಗೆ ಮಾಸಿಕ 01 ಪುಟದ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತನ್ನು ಸರ್ಕಾರದ ವತಿಯಿಂದ ಬಿಡುಗಡೆ ಮಾಡಲು ಸೂಕ್ತ ಆದೇಶವನ್ನು ಹೊರಡಿಸುವುದರ ಮೂಲಕ ಈ ಎರಡೂ ಸಮುದಾಯಗಳ ಪತ್ರಿಕೆಗಳಿಗೆ ಅನುಕೂಲ ಮಾಡಿಕೊಡಬೇಕು.
- ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರಕಟವಾಗಿ ಪ್ರಸಾರವಾಗುತ್ತಿರುವ ಜಿಲ್ಲಾ ಮತ್ತು ಪ್ರಾದೇಶಿಕ ವತ್ರಿಕೆಗಳಿಗೆ ಪ್ರತಿ ಮಾಹೆ 02 ಪುಟಗಳ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಕಲಬುರಗಿಯಲ್ಲಿರುವ ಕೆಕೆಆರ್ಡಿಬಿ ವತಿಯಿಂದ ಬಿಡುಗಡೆ ಮಾಡುವಂತೆ ಸರ್ಕಾರದ ವತಿಯಿಂದ ಆದೇಶ ಹೊರಡಿಸಬೇಕು. ಸರ್ಕಾರ ಪ್ರತಿ ವರ್ಷ ಸುಮಾರು 5 ಸಾವಿರ ಕೋಟಿಗಳ ಅನುದಾನವನ್ನು ಕೆಕೆಆರ್ಡಿಬಿಗೆ ಬಿಡುಗಡೆ ಮಾಡುತ್ತದೆ. ಈ ಅನುದಾನದಲ್ಲಿ ಸಾಕಷ್ಟು ಜನಪರವಾದ ಅಭಿವೃದ್ಧಿ ಕಾರ್ಯಗಳು 7 ಜಿಲ್ಲೆಗಳಲ್ಲಿ ನಡೆಯುತ್ತಿರುತ್ತವೆ. ಅಂತಹ ಅಭಿವೃದ್ಧಿ ಕಾಮಗಾರಿಗಳ ಮತ್ತು ಪೂರ್ಣಗೊಂಡ ಕಾಮಗಾರಿಗಳ ಕುರಿತ ಜಾಹೀರಾತುಗಳನ್ನು ಪತ್ರಿಕೆಗಳಿಗೆ ನೀಡಬೇಕು.

