ವಿವಿಧ ಸಮಾಜದ ಮಠಮಾನ್ಯಗಳಿಗೆ 80 ಎಕರೆ ಭೂಮಿ ಹಂಚಿಕೆ ಭರವಸೆ ನೀಡಿದ ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಗಿನೆಲೆ ಗುರುಪೀಠದ ಶಾಖಾಮಠದ ಭಕ್ತರ ಭಂಡಾರದ ಕುಟೀರಕ್ಕೆ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿದ್ದೆ, ಇಂದು ನಾನೇ ಉದ್ಘಾಟನೆ ಮಾಡುತ್ತಿರುವುದು ಹೆಚ್ಚು ಸಂತಸ ನೀಡಿದೆ. ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. 10 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಒಂದು ಎಕರೆ ಜಾಗವನ್ನು ಮಹೇಶ್ ಅವರು ಕೊಟ್ಟಿದ್ದು ಶ್ಲಾಘನೀಯ. ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಹಾಗೂ ಶಾಖಾಮಠ ಮತ್ತು ಬೆಂಗಳೂರು ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.

- Advertisement - 

ಕಾಗಿನೆಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿಯವರು ಯಾವುದೇ ಕಟ್ಟಡಗಳನ್ನು ಅತ್ಯಂತ ಕ್ಷಿಪ್ರವಾಗಿ ಕಟ್ಟುತ್ತಾರೆ. ಎರಡೇ ವರ್ಷಗಳಲ್ಲಿ ಭಕ್ತರಿಂದ ವಂತಿಗೆ ಪಡೆದು ನಿರ್ಮಾಣ ಮಾಡಿದ್ದಾರೆ. ಇದು ಅವರ ಕಾರ್ಯದಕ್ಷತೆಗೆ ಸಾಕ್ಷಿ. ಸಚಿವರಾದ ಬೈರತಿ ಸುರೇಶ್ ಅವರು 50 ಲಕ್ಷ ರೂ.ಗಳ ದೇಣಿಗೆ ನೀಡಿದ್ದು, ಈ ಕಾರ್ಯಕ್ಕೆ ವಂತಿಗೆ ನೀಡಿದ ಎಲ್ಲರಿಗೂ ಧನ್ಯವಾದಗಳು. ಕುಟೀರವನ್ನು ನಿರ್ಮಾಣ ಮಾಡಲು ಎಲ್ಲರ ಸಹಾಯ ಪಡೆದಿದ್ದಾರೆ. ಸುಮಾರು 4 ಕೋಟಿಯಷ್ಟು ಹಣವನ್ನು ವೆಚ್ಚ ಮಾಡಿದ್ದು, ಇತರರು ವಸ್ತುಗಳ ರೂಪದಲ್ಲಿ ದೇಣಿಗೆ ನೀಡಿದ್ದಾರೆ.

ಮಠಮಾನ್ಯಗಳು ಬೆಳೆಯಬೇಕಾದರೆ ಜನರಿಂದ ಮಾತ್ರ ಸಾಧ್ಯ. ಸರ್ಕಾರದ ಮೇಲೆ ಅವಲಂಬಿತವಾದರೆ ಬೆಳೆಯಲು ಸಾಧ್ಯವಿಲ್ಲ. 1992 ರಲ್ಲಿ ಪ್ರಾರಂಭವಾದ ಮಠವನ್ನು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 25 ಲಕ್ಷ ರೂ.ಗಳ ನೀಡಲು ಮುಂದಾದಾಗ, ಅದನ್ನು ನಿರಾಕರಿಸಲಾಗಿತ್ತು.

- Advertisement - 

ಉದ್ಯಮಿ ಹರಿ ಖೋಡೆಯವರು ಈ ಮಠ ಕುರುಬರ ಮಠವಲ್ಲ, ದಲಿತರು, ಅಲ್ಪಸಂಖ್ಯಾತರು ಹಾಗೂ ಮಠವನ್ನು ಹೊಂದಿಲ್ಲದವರಿಗೆ ಸೇರಿದ ಮಠ ಎಂದು ಘೋಷಣೆ ಮಾಡಿದ್ದರು. ಜನರಲ್ಲಿ ಜಾಗೃತಿ ಮೂಡಿಸಲು ಮಠದ ಅಗತ್ಯವಿದೆ. ಮಠಗಳಿಲ್ಲದೆ ಹೋದರೆ ಶಿಕ್ಷಣ, ಆರೋಗ್ಯ, ಸಂಘಟನೆ ಸಾಧ್ಯವಾಗುತ್ತಿರಲಿಲ್ಲ.

ಕಾಗಿನೆಲೆ ಮಹಾಸಂಸ್ಥಾನದ ಪೀಠದ ವತಿಯಿಂದ ಸಮಾಜಮುಖಿ ಕೆಲಸಗಳಾಗುತ್ತಿರುವುದು ಶ್ಲಾಘನೀಯ. ಇದಕ್ಕೆ ಶ್ರಮಿಸುತ್ತಿರುವ ಜಗದ್ಗುರು ನಿರಂಜನಾನಂದ ಸ್ವಾಮಿ ಹಾಗೂ ಶಾಖಾಮಠದ ಸ್ವಾಮೀಜಿಗಳಿಗೆ ಅಭಿನಂದಿಸುತ್ತೇನೆ. ಮೈಸೂರಿನಲ್ಲಿ ಯಾಂದಳ್ಳಿ ಗ್ರಾಮದಲ್ಲಿ 12 ಎಕರೆ ಜಾಗವನ್ನು ನೀಡಲಾಗಿದ್ದು, ಭವನ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಬನಶಂಕರಿಯಲ್ಲಿ ಕಾನೂನು ಕಾಲೇಜು ಮತ್ತು ಯುಪಿಎಸ್‌ಸಿ ತರಬೇತಿಗಾಗಿ ಕಟ್ಟಡವನ್ನು ಈಗಾಗಲೇ ನಿರ್ಮಿಸಲಾಗಿದೆ.

ಕುರುಬರ ಸಂಘದ ನೂತನ ಕಟ್ಟಡ ನಿರ್ಮಾಣವನ್ನು  34 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯಲ್ಲಿ 300 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಮತ್ತು ಯುಪಿಎಸ್‌ಸಿ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವ ಶ್ರೀ ಕಾಗಿನೆಲೆ ಗುರುಪೀಠದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ವ್ಯಾಪ್ತಿಯಲ್ಲಿ 80 ಎಕರೆ ಸರ್ಕಾರಿ ಜಮೀನನ್ನು ವಿವಿಧ ಸಮಾಜದ ಮಠಮಾನ್ಯಗಳಿಗೆ ಹಂಚುವ ಬಗ್ಗೆ ಸರ್ಕಾರ ಪರಿಶೀಲಿಸಿದೆ. ವಿವಿಧ ಸಮಾಜದ ಸ್ವಾಮೀಜಿಗಳು ಕೋರಿದಂತೆ ಸಮಾಜದ ಅಭಿವೃದ್ಧಿಗೆ ಅನುದಾನವನ್ನು ನೀಡಲು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

 

 

 

Share This Article
error: Content is protected !!
";