ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಒಂದೂವರೆ ತಿಂಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದ ಸಿಎಂ ಬದಲಾವಣೆ ಚರ್ಚೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತೆರೆ ಎಳೆದಿದ್ದಾರೆ.
ಬ್ರೇಕ್ಫಾಸ್ಟ್ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇನ್ನು ರಾಜಕಾರಣ ಇಲ್ಲ. ಏನಿದ್ರೂ ಜನರ ಸೇವೆ, ಆಡಳಿತ ಅಷ್ಟೇ. ಡಿನ್ನರ್ಗೆ ಸಿಎಂ ಕರೆಯುವ ದಿನಾಂಕ ನಿಮಗೆ ಹೇಳುತ್ತೇನೆ ಎಂದಿದ್ದಾರೆ.
ರಾಜಕೀಯವಾಗಿ ನಮ್ಮಿಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಹಿಂದೆಯೂ ಕೆಲಸ ಮಾಡಿಕೊಂಡು ಬಂದಿದ್ದೇವೆ, ಮುಂದೆಯೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ, ಇರೋದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು ಎಂದು ತಿಳಿಸಿದರು.
ಗುಂಪುಗಾರಿಕೆಗೆ ಹಿಂದೆಯೂ ಅವಕಾಶ ಕೊಡಲಿಲ್ಲ, ಈಗಲೂ ಕೊಡಲ್ಲ, ಅದರ ಅವಶ್ಯಕತೆಯೂ ಇಲ್ಲ. ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಅದು ನಮ್ಮ ಕರ್ತವ್ಯ ಎಂದರು.
ಪ್ರತಿಯೊಬ್ಬ ಶಾಸಕರನ್ನು, ಕಾರ್ಯಕರ್ತರನ್ನು ಮತ್ತು ನಮ್ಮ ಪಕ್ಷವನ್ನು ಶಕ್ತಿಶಾಲಿಯಾಗಿ ಬೆಳೆಸಬೇಕು. ಅದೂ ನಮ್ಮಿಬ್ಬರ ಕರ್ತವ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. 2028ಕ್ಕೆ ಮತ್ತೆ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರಲು ಹಲವು ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಇದ್ದರು.

