ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳುವುದಕ್ಕೆ ಅವರೇನು ಮಾರಾಟಕ್ಕಿರುವ ಸರಕುಗಳಾ? ಅಥವಾ ತಾವು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದಷ್ಟು ದುರ್ಬಲ ಮುಖ್ಯಮಂತ್ರಿಗಳಾ? ಎಂದು ಅವರು ಕಟು ಶಬ್ದಗಳಿಂದ ಪ್ರಶ್ನಿಸಿದ್ದಾರೆ.
ಅಥವಾ “ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಕಾಂಗ್ರೆಸ್ ಪಕ್ಷದ ಎರಡೂ ಕಣ್ಣು ಹೋಗಲಿ” ಎನ್ನುವ ಧೋರಣೆಯಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನೇ ಶಾಶ್ವತವಾಗಿ ಮುಳುಗಿಸಲೂ ಹೇಸುವುದಿಲ್ಲ ಎಂದು ತಮ್ಮ ಹೈಕಮಾಂಡ್ ನಾಯಕರಿಗೆ ಪರೋಕ್ಷ ಎಚ್ಚರಿಕೆ ಏನಾದರೂ ಕೊಡುತ್ತಿದ್ದೀರಾ? ಎಂದು ಆರ್.ಅಶೋಕ್ ಅಬ್ಬರಿಸಿದ್ದಾರೆ.