ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಮೆಟ್ರೋ ಯೋಜನೆಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಬಾರದೆಂದು ಪತ್ರ ಬರೆದಿದೆ ಎಂದು ಇದೇ ವೇಳೆ ತಿಳಿಸಿದರು.
ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿದ ಕುಮಾರಸ್ವಾಮಿ, ಎತ್ತಿನಹೊಳೆ ಯೋಜನೆ 8,000 ಕೋಟಿಯಿಂದ ಪ್ರಾರಂಭವಾಗಿ 33,000 ಸಾವಿರ ಕೋಟಿ ಅಂದಾಜು ವೆಚ್ಚಕ್ಕೆ ಏರಿಕೆ ಮಾಡಲಾಗಿದೆ. ಸಿಎಜಿ ರಿಪೋರ್ಟ್ ನೋಡಿದ್ದೀರಾ?. ಎತ್ತಿನಹೊಳೆ ಪ್ರಾಜೆಕ್ಟ್ಅನ್ನು ಕಳಪೆ ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಮುಂದುವರೆದು ಮಾತನಾಡಿ ಬಿಬಿಎಂಪಿ ಚುನಾವಣೆಯ ಹೊಂದಾಣಿಕೆ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಭ್ರಷ್ಟ, ಕೆಟ್ಟ ಸರ್ಕಾರವನ್ನು ತೆಗೆಯಲು ನಾವು ಒಂದಾಗಿ ಹೋರಾಡುತ್ತೇವೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬದಲಾಗ್ತಾರಾ ಎಂಬುದಕ್ಕೆ, ನಾನೇನು ಜ್ಯೋತಿಷಿಯಲ್ಲ. ಮುಖ್ಯಮಂತ್ರಿ ಯಾರಾದರೇನು? ಎಂದು ಮಾರ್ಮಿಕವಾಗಿ ನುಡಿದರು.
ಈ ಬಾರಿಯ ಕೇಂದ್ರದ ಬಜೆಟ್ನಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಕ್ಯಾನ್ಸರ್ಗೆ ಸಂಬಂಧಪಟ್ಟ 17 ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಬೃಹತ್ ಕೈಗಾರಿಕೆ ವಲಯಕ್ಕೂ ಉತ್ತೇಜನ ನೀಡಲಾಗಿದೆ. ಕುಮಾರಸ್ವಾಮಿ ಮಂಡ್ಯಕ್ಕೆ ಏನ್ ತಂದರು? ರಾಜ್ಯಕ್ಕೆ ಏನು ತಂದರು? ಅಂತಾ ಪ್ರತಿನಿತ್ಯ ಮಂಡ್ಯ ಶಾಸಕರು ಪ್ರಶ್ನಿಸುತ್ತಾ ಸಣ್ಣತನ ತೋರಿಸುತ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್ನಲ್ಲಿ ಉತ್ತರವಿದೆ ಎಂದು ಹೇಳಿದರು.
ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆಯ ಘಟಕ ತೆರೆಯಲು 100 ಎಕರೆ ಜಾಗವನ್ನು ಮಂಡ್ಯದಲ್ಲೇ ಕೊಡಲು ರಾಜ್ಯ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಈಗಾಗಲೇ ಮಂಡ್ಯ ಜಿಲ್ಲಾಧಿಕಾರಿಗೂ ಸಹ ಪತ್ರ ಹೋಗಿದೆ. ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಬದ್ಧವಾಗಿದೆ. ಇದಕ್ಕಾಗಿ ಭೂಮಿ ಕೊಡಲು ಸಿಎಂಗೆ ನಾನೇ ಪತ್ರ ಬರೆದಿದ್ದೇನೆ. ನಾಟಕವಾಡಲು ನಾನು ಪತ್ರ ಬರೆದಿಲ್ಲ. ನಾಟಕವಾಡಲು ಪ್ರಧಾನಿಗಳು ನಂಗೆ ಈ ಸ್ಥಾನ ಕೊಟ್ಟಿಲ್ಲ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಜೆಟ್ನಲ್ಲಿ ಅನ್ಯಾಯವಾಗಿಲ್ಲ:
ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ. ಎಆರ್ಎಐ ಸ್ಥಾಪನೆಗೆ ಬಜೆಟ್ನಲ್ಲಿ ಪ್ರಾಥಮಿಕವಾಗಿ 500 ಕೋಟಿ ರೂ ಹಣ ಮೀಸಲಿಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ಸಂಸದರು ಬಾಯಿ ತೆರೆಯಲ್ಲ ಅಂತೀರಿ. ಕೇಂದ್ರದ ಜತೆ ನಿಮ್ಮ ಸಹಕಾರ ಎಷ್ಟಿದೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಕುಮಾರಸ್ವಾಮಿ, ರಾಜ್ಯದ ಯಾವೊಬ್ಬ ಮಂತ್ರಿಯೂ ನನ್ನ ಬಳಿ ಬಂದಿಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ. ನೀವು ಮಾಡಿರುವ ಸಾಲ ತೀರಿಸಲು ನಿಮ್ಮ ಬಳಿ ಹಣ ಇಲ್ಲವೇ? ಮೆಟ್ರೋ ಪ್ರಯಾಣ ದರ ಏರಿಸಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತೀರಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ, ಕೇಂದ್ರದ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲಿ. ಮಾವಿನ ಬೆಲೆ ಕುಸಿತಗೊಂಡಾಗ ಬೆಂಬಲ ಬೆಲೆ ಕೊಟ್ಟಿದ್ದು ನರೇಂದ್ರ ಮೋದಿ ಸರ್ಕಾರ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವನ್ನು ದೂರುವುದನ್ನು ಬಿಡಿ ಎಂದು ಕಿಡಿಕಾರಿದರು.
ಖಾಲಿ ಚೊಂಬಿನ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಕೇಂದ್ರದ 53ಕ್ಕೂ ಹೆಚ್ಚಿನ ಸ್ಕೀಮ್ಗಳನ್ನು ರಾಜ್ಯ ಸರ್ಕಾರಗಳು ಬಳಕೆ ಮಾಡಿಕೊಳ್ಳುತ್ತಿಲ್ಲ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಬಜೆಟ್ ವಿರುದ್ಧ ವ್ಯಂಗ್ಯ ಮಾಡಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ನಮ್ಮ ಜತೆಗಿಲ್ಲ:
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಜತೆಯಲ್ಲಿ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಅವರು ಬೇರೆ ಬೇರೆ ಮಹಾನ್ ನಾಯಕರ ಜತೆಯಲ್ಲಿದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದೂ ಇರದವರನ್ನು ನಾವು ಜತೆಯಲ್ಲಿಟ್ಟುಕೊಳ್ಳಬೇಕಾ? ನನ್ನ ಮುಂದೆ ಪದೇ ಪದೇ ಜಿಟಿಡಿ ಹೆಸರು ಪ್ರಸ್ತಾಪ ಮಾಡಬೇಡಿ ಎಂದು ಕುಮಾರಸ್ವಾಮಿ ಅವರು ಮಾಧ್ಯಮದವರಲ್ಲಿ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಭಾವನಾತ್ಮಕ ಸಂಬಂಧವಿದೆ. ಅಲ್ಲಿ ಯಾರನ್ನಾದರೂ ಅಭ್ಯರ್ಥಿ ಮಾಡಿದರೆ ಗೆಲ್ಲುತ್ತಾರೆ. ಸಾಕಷ್ಟು ಜನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ದರಿದ್ದಾರೆ. ಮುಂದಿನ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲೂ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೆಚ್ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

