ಸಿಎಂ ಸಿದ್ದರಾಮಯ್ಯ ಅವರು ಖಚಿತವಾಗಿ ಬದಲಾಗಲಿದ್ದಾರೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಖಚಿತವಾಗಿ ಬದಲಾವಣೆಯಾಗಲಿದ್ದಾರೆ. ಕಾಂಗ್ರೆಸ್‌ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು, ಎಲ್ಲರೂ ಸಿಎಂ ಆಗಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದರು.

- Advertisement - 

ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಆಗಿಯೇ ಮುಂದುವರೆಯುತ್ತಾರೆಂದು ಪಕ್ಷದ ವರಿಷ್ಠರು ಹೇಳಬೇಕು. ಆದರೆ, ಭಯದಿಂದ ಸ್ವತಃ ಸಿದ್ದರಾಮಯ್ಯನವರೇ ಅದನ್ನು ಪದೇ ಪದೇ ಹೇಳುತ್ತಿದ್ದಾರೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎನ್ನುವ ಡಿ.ಕೆ.ಶಿವಕುಮಾರ್‌ ಅವರೇ ಈ ರೀತಿಯ ಸಂದೇಶ ನೀಡುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ, ಅಭಿವೃದ್ಧಿ ಶೂನ್ಯವಾಗಿ ಶಾಸಕರು ಬೇಸರಗೊಂಡಿದ್ದಾರೆ. ಜನರಲ್ಲಿ ವಿಶ್ವಾಸ ಹೊರಟುಹೋಗಿದೆ ಎಂದು ಆರ್.ಅಶೋಕ್ ದೂರಿದರು.

- Advertisement - 

ಜಿಲ್ಲೆಗಳ ಹೆಸರನ್ನು ಬದಲಿಸಿದಂತೆಯೇ ಏಕಾಏಕಿ ವಿವಿಗಳ ಹೆಸರು ಬದಲಿಸುತ್ತಿದ್ದಾರೆ. ಮನಮೋಹನ್‌ ಸಿಂಗ್‌ ಹೆಸರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೂಕ್ತವಲ್ಲ. ಪೂರ್ವಿಕರು ಇಟ್ಟ ಹೆಸರನ್ನು ಹೀಗೆ ಬದಲಿಸಬಾರದು. ಬೆಂಗಳೂರನ್ನು ಈಗಾಗಲೇ ಒಡೆದು ಹಾಕಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಒಂದಾಗಿಸಲಿದೆ. ಬೆಂಗಳೂರು ಅಭಿವೃದ್ಧಿ ಮಾಡುವುದು ಬಿಟ್ಟು, ನಾಮಫಲಕ ಬದಲಿಸುವುದರಿಂದ ಕೋಟ್ಯಂತರ ರೂಪಾಯಿ ವ್ಯರ್ಥವಾಗುತ್ತದೆ ಎಂದು ಅವರು ಆರೋಪಿಸಿದರು. ಬೆಂಗಳೂರಿಗೆ ದಕ್ಷಿಣ, ಉತ್ತರ ಎಂದು ಹೆಸರು ನಾಮಕಾರಣ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯನವರಿಗೆ ಜಾತಿ ಗಣತಿ ವರದಿ ವಿಚಾರದಲ್ಲಿ ಮುಖಭಂಗವಾಗಿದೆ. ಕೇಂದ್ರ ಸರ್ಕಾರ ಮಾಡುವಾಗ ಇವರು ಮತ್ತೆ ಗಣತಿ ಮಾಡಿದರೆ ಅದಕ್ಕೆ ಕಿಮ್ಮತ್ತಿರುವುದಿಲ್ಲ. ಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅಶೋಕ್ ತಿಳಿಸಿದರು.

- Advertisement - 

ಹೈಕೋರ್ಟ್ ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ನೀಡಿರುವುದರಿಂದ ಬಿಜೆಪಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಕೋರ್ಟ್‌ ನಮಗೆ ನಿಜವಾದ ನ್ಯಾಯ ನೀಡಿದೆ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ನಿಷೇಧಿಸಿದರೆ ಮತ್ತೆ ಸಂಘಟನೆ ಪುಟಿದೇಳುತ್ತದೆ. ನಾನು, ಪ್ರಧಾನಿ ನರೇಂದ್ರ ಮೋದಿ, ಅನೇಕ ರಾಜ್ಯಗಳ ರಾಜ್ಯಪಾಲರು, ಹಲವಾರು ಸಂಸದರು, ಶಾಸಕರು ಆರ್‌ಎಸ್‌ಎಸ್‌ನಲ್ಲಿದ್ದಾರೆ. ಸಂಘಟನೆಯಲ್ಲಿ ಶಿಸ್ತು ಕಲಿಸಲಾಗುತ್ತದೆ. ಆರ್‌ಎಸ್‌ಎಸ್‌ ಬಗ್ಗೆ ತಿಳಿದು ಮಾತನಾಡಬೇಕು. ಅದು ದೇಶಭಕ್ತ ಸಂಘಟನೆ ಎಂದು ಅಶೋಕ್​ ಎಚ್ಚರಿಸಿದರು.

ಅಂಬೇಡ್ಕರ್‌ ಬರೆದ ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದ ಪದ ಇಲ್ಲ. ಈ ಬಗ್ಗೆ ಕಾಂಗ್ರೆಸ್‌ ನಾಯಕರು ಉತ್ತರಿಸಲಿ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕಿದೆ. ಇವೆರಡೂ ಪದಗಳು ಸಂವಿಧಾನ ಪುಸ್ತಕಕ್ಕೆ ಸೇರ್ಪಡೆಯಾಗುವಾಗ ಕೂಡ ಸಂಸತ್ತಿನಲ್ಲಿ ಚರ್ಚೆಯಾಗಿಲ್ಲ ಎಂದು ಅಶೋಕ್ ತಿಳಿಸಿದರು.

 

 

Share This Article
error: Content is protected !!
";