ತಾಯಿ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸಿ: ಸಿಎಂ ಸಿದ್ದರಾಮಯ್ಯ

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಮೈಸೂರು:
ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯನ್ನು ತಾಯಿ ಸನ್ನಿಧಿಯಲ್ಲೇ ನಡೆಸಿ ಪ್ರಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ಹಿಂದೆಯೂ ಸಮಿತಿ ಇತ್ತು. ಆದರೆ ಪ್ರಾಧಿಕಾರ ರಚನೆಯಿಂದಾಗಿ ಅಭಿವೃದ್ಧಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶ ಒದಗಿದಂತಾಗಿದೆ ಎಂದರು.

ಇಲ್ಲಿಗೆ ಬರುವ ಭಕ್ತರಿಗೆ ಹೆಚ್ಚಿನ ಮತ್ತು ಉನ್ನತ ಮಟ್ಟದ ಆರೋಗ್ಯಕರ ಸವಲತ್ತು ಹಾಗೂ  ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಶ್ರೀ ಕ್ಷೇತ್ರ ಹಾಗೂ ದೇವಸ್ಥಾನದ ಸಂಪ್ರದಾಯ ಮತ್ತು ಚರಿತ್ರೆ, ಘನತೆಯನ್ನು ಕಾಪಾಡುವ ಜೊತೆಗೆ ಉನ್ನತೀಕರಿಸಬೇಕು. ಪ್ರಾಧಿಕಾರ ವ್ಯವಸ್ಥಿತವಾಗಿ ನಡೆಯಬೇಕು. ಕಾಲ ಕಾಲಕ್ಕೆ ಸಭೆಗಳು ನಡೆದು ಹೆಚ್ಚಿನ ಶ್ರಮವನ್ನು ಶುಚಿತ್ವಕ್ಕೆ ಹಾಕಬೇಕು. ಕಸವನ್ನು ಆಗ್ಗಿಂದಾಗೇ ತೆರವುಗೊಳಿಸಬೇಕು. ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ವಾಹನ ನಿಲುಗಡೆಗೆ ಇನ್ನಷ್ಟು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹಣಕ್ಕೆ ತೊಂದರೆ ಇಲ್ಲ. ಕೇಳಿದಷ್ಟು ಹಣವನ್ನು ಕೇಳಿದಾಗಲೆಲ್ಲಾ ಒದಗಿಸಲಾಗುತ್ತಿದ್ದರೂ ಕೆಲಸಗಳು ಮಾತ್ರ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದನ್ನು ನಾನು ಸಹಿಸಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ನಾನು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ. ತಾಯಿ, ಶಕ್ತಿ ದೇವತೆ ಚಾಮುಂಡಿ ದೇವಿ ಬಗ್ಗೆ ಕೋಟ್ಯಂತರ ಮಂದಿಗೆ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ ಇದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ. ಇವರೆಲ್ಲರಿಗೂ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು. ತಾಯಿ ಸನ್ನಿದಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು.
ಕೊಪ್ಪಳ ಹುಲಿಗಮ್ಮ ದೇವಸ್ಥಾನ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಗಳ ಹೆಚ್ಚಿನ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಬಗ್ಗೆಯೂ ಹೆಚ್ಚಿನ ಬೇಡಿಕೆ ಇದೆ. ಈ ಬಗ್ಗೆಯೂ ಮುಂದುವರೆಯುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ಡಾ.ತಿಮ್ಮಯ್ಯ, ಹರೀಶ್ ಗೌಡ, ಜಿ.ಟಿ.ದೇವೇಗೌಡ, ವಿವೇಕಾನಂದ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon