ಜ.14, 15 ರಂದು ಸಿದ್ದರಾಮೇಶ್ವರರ ಜಯಂತಿ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಭಾಗಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
852ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಈ ಬಾರಿ ಬೆಂಗಳೂರಿನಲ್ಲಿ ಅರಮನೆ ಆವರಣದಲ್ಲಿ ಜ.14 ಮತ್ತು 15ರಂದು ಎರಡು ದಿನಗಳ ಕಾಲ ಆಯೋಜನೆ ಮಾಡಲಾಗಿದೆ ಎಂದು ಜಯಂತಿ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಯಂತಿಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಕರ್ಮಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ನೊಳಂಬ ಲಿಂಗಾಯಿತ ಸಂಘದಿಂದ ಪ್ರತಿ ವರ್ಷವೂ ಮಾಡಿಕೊಂಡು ಬರಲಾಗುತ್ತಿದೆ ಎಂದರು.

12ನೇ ಶತಮಾನದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ತನ್ನದೇ ಆದ ಕಾಯಕ ಮಾಡುತ್ತಿದ್ದ ಸಿದ್ದರಾಮ, ಅಲ್ಲಮಪ್ರಭುಗಳಿಂದ ದೀಕ್ಷೆ ಪಡೆದು ಬಸವಾದಿ ಶಿವಶರಣರ ಜತೆಯಲ್ಲಿ ಶರಣ ತತ್ವಗಳನ್ನು ಅನುಷ್ಠಾನ ಮಾಡುತ್ತಿದ್ದ. ಅಂದಿನಿಂದಲೂ ಸಿದ್ದರಾಮನ ಭಕ್ತರು ಮತ್ತು ಅನುಯಾಯಿಗಳು ನಾಡಿನ ಉದ್ದಗಲಕ್ಕೂ ನೆಲೆಸಿದ್ದಾರೆ ಎಂದರು.
ನೊಳಂಬರು ಎಂದರೆ ಶ್ರಮಜೀವಿಗಳು. ರಾಜ್ಯದಲ್ಲಿ 12ನೇ ಶತಮಾನದಿಂದ 18ನೇ ಶತಮಾನದ ತನಕ ಸುಧೀಘವಾಗಿ ಆಳಿದ ಸಾಮಂತ ಮನೆತನಗಳಲ್ಲಿ ನೊಳಂಬ ಅರಸು ಮನೆತನವೂ ಒಂದು. ಈ ಸಂದರ್ಭದಲ್ಲಿ ನೊಳಂಬ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ನೊಳಂಬ ಇತಿಹಾಸ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ನೊಳಂಬ ವೆಬ್ ಸೈಟ್ ಅನಾವರಣ ಮಾಡಲಾಗುವುದು ಎಂದರು.

14 ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರದ ಪೀಠಾಧ್ಯಕ್ಷ ಶ್ರೀ ಗುರು ಪರದೇಶಿ ಕೇಂದ್ರ ಸ್ವಾಮೀಜಿ, ಪಂಡಿತಾರಾಧ್ಯ ಸ್ವಾಮೀಜಿ,ಗೋಡೆಕೆರೆ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಎಂಪಿ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

15ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿಡ್ಲೇಹಳ್ಳಿ ಮಠದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಬೆಟ್ಟದಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋ ಭಾಷಣ ಮಾಡಲದಿದಾರೆ. ಸಚಿವರಾದ ಎಂ.ಬಿ.ಪಾಟೀಲ್, ಭೈರತಿ ಸುರೇಶ್, ಶಾಸಕ ಶಾಮನೂರು ಶಿವಶಂಕರಪ್ಪ ಎವರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸಾಹಿತ್ಯ ಗೋಷ್ಠಿ ಏರ್ಪಡಿಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ. ಮಹಿಳಾ ಮತ್ತು ಕೃಷಿ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಎರಡೂ ದಿನಗಳು ಸಾಂಸ್ಕೃತಿಕ ಕಾರ್ಯಕ್ರಮ, ಇಷ್ಠಲಿಂಗಪೂಜೆ, ಲಿಂಗಧಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೊಳಂಬ ಸಂಘದ ಮಾಜಿ ಅಧ್ಯಕ್ಷ ಕಾಮನಕೆರೆ ಶಶಿಧರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಟ್ಟದಹಳ್ಳಿ ರೇಣುಕಾರಾಧ್ಯ, ವೈ.ಎಸ್.ಸಿದ್ದರಾಮೇಗೌಡ, ಎಚ್.ಆರ್. ಮಲ್ಲಿಕಾರ್ಜುನಯ್ಯ, ನೊಳಂಬ ಸಂಘದ ಕಾಮನಕೆರೆ ಶಶಿಧರ್, ಪದಾಧಿಕಾರಿಗಳಾದ ಎಚ್.ರಾಮಲಿಂಗಪ್ಪ, ರುದ್ರಪ್ಪ, ಎಸ್.ಆರ್.ನಟರಾಜ್, ಕುಬೇರಪ್ಪ, ಜಿ.ಎಸ್.ಧನಂಜೇಯ ಮತ್ತಿತರರು ಹಾಜರಿದ್ದರು.

- Advertisement -  - Advertisement - 
Share This Article
error: Content is protected !!
";