ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ, ಆರ್ಥಿಕ, ಸಮಾನತೆಯಿಂದ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಂದಾಯ ಇಲಾಖೆ ಮತ್ತು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ವತಿಯಿಂದ
ಹಮ್ಮಿಕೊಳ್ಳಲಾದ ಗಾಂಧಿ ಜಯಂತಿ ಮತ್ತು ವಿಶ್ವ ಅಹಿಂಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಹೋರಾಟ ನಡೆಸಿ ಗಾಂಧೀಜಿಯು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರು. ಈ ಹೋರಾಟದಲ್ಲಿ ಲಕ್ಷಾಂತರ ಜನ ಭಾಗವಹಿಸುವಂತೆ ಪ್ರೇರೇಪಿಸಿದರು.
ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿರುವಂತೆ ಗಾಂಧೀಜಿಯವರು ಭಾರತಕ್ಕಷ್ಟೇ ನಾಯಕರಲ್ಲ. ಇಡೀ ವಿಶ್ವಕ್ಕೆ ನಾಯಕರು. ಗಾಂಧೀಜಿಯವರ ದೇಹ ನಶಿಸಿದರು ಅವರ ಚಿಂತನೆಗಳು ನಮ್ಮೊಂದಿಗೆ ಎಂದೆಂದಿಗೂ ಜೀವಂತವಾಗಿದೆ ಎಂದರು.
ನಮ್ಮ ಸರ್ಕಾರ ಜನರಿಗೆ ಐದು ಗ್ಯಾರೆಂಟಿಗಳನ್ನು ನೀಡಿ ಅವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಬಡಜನರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂದು ಮಾಜಿ ಪ್ರಧಾನಿ ದಿವಂಗತ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನೂ ಸಹ ಆಚರಿಸುತ್ತಿದ್ದೇವೆ. ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಗಾಂಧಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಅವರುಗಳ ಜೀವನ ನಮಗೆ ಮಾದರಿಯಾಗಲಿ ಎಂದರು.
ಪ್ರತಿ ಜಿಲ್ಲೆಗೆ ಗಾಂಧಿ ಭವನ ನಿರ್ಮಾಣಕ್ಕೆ ತಲಾ 3 ಕೋಟಿಯಂತೆ 30 ಜಿಲ್ಲೆಗಳಿಗೆ ಒಟ್ಟು 90 ಕೋಟಿ ರೂಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಸುಮಾರು 17 ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣಗೊಂಡಿದ್ದು, ಉಳಿದ ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣ ಹಾಗೂ ಅದಕ್ಕೆ ತಗಲುವ ನಿರ್ವಹಣಾ ವೆಚ್ಚವನ್ನು ಭರಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ 90 ಕೋಟಿ ಅನುದಾನ ಒದಗಿಸಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭವನ್ನು ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸರ್ಕಾರ ಮೊದಲ ಹಂತವಾಗಿ 25 ಕೋಟಿ ಬಿಡುಗಡೆ ಮಾಡಿದೆ. ಗಾಂಧಿ ರಾಜ್ಯದಲ್ಲಿ ಸಂಚರಿಸಿದ 50 ಪ್ರಮುಖ ಸ್ಥಳಗಳಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ಜಯಶ್ರೀ ದತ್ತಿ ಪುರಸ್ಕೃತ ಸಾಹಿತಿ ಲೇಖಕ ಡಾ.ನಟರಾಜ್ ಹುಳಿಯಾರ್, 2024 ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತರಾದ ಜಿ.ಬಿ.ಶಿವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಎನ್.ಆರ್.ವಿಶುಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯಾಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಗಾಂಧಿ ಸ್ಮಾರಕ ನಿಧಿಯ ನೌಕರನ ಅಂತರ್ಜಾತಿ ವಿವಾಹಕ್ಕೆ ಸಹ ವೇದಿಕೆ ಸಾಕ್ಷಿಯಾಯಿತು.