ಮನೆಯ ಬಾಗಿಲಿಗೆ ಸಿ.ಎಂ ಸಿದ್ದರಾಮಯ್ಯನವರ ಚಿತ್ರ ಕೆತ್ತನೆ

News Desk

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಚಮಲ್ಲನಹಳ್ಳಿ ಗ್ರಾಮದ ಮಲ್ಲೇಶಪ್ಪರ ತಿಪ್ಪೇಸ್ವಾಮಿ ಹಾಗೂ ಪಾರ್ವತಿ ದಂಪತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ತಮ್ಮ ಮನೆ ಮುಖ್ಯ ಬಾಗಿಲ ಮೇಲೆ ಸಿದ್ದರಾಮಯ್ಯ ಅವರ ಭಾವಚಿತ್ರ ಕೆತ್ತನೆ ಮಾಡಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯಲ್ಲಿ ಪಾರ್ವತಮ್ಮ ಅವರಿಗೆ ಸುಮಾರು 30 ಸಾವಿರದಷ್ಟು ಹಣ ಸಂದಾಯವಾಗಿತ್ತು. ಈ ಹಣವನ್ನು ಯಾವುದಕ್ಕೂ ಬಳಸದೆ ಕೂಡಿಟ್ಟುಕೊಂಡಿದ್ದರು. ಇದೇ ಹಣವನ್ನು ಬಳಸಿಕೊಂಡು ತಮ್ಮ ಮನೆಗೆ ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಬಾಗಿಲನ್ನು ಅಳವಡಿಸಲು ಚಿಂತನೆ ನಡೆಸಿದರು.
ಇದಕ್ಕಾಗಿ ತಮ್ಮ ಗ್ರಾಮದ ಕರಕುಶಲಗಾರ ಎಚ್.ಎನ್. ದುರುಗೇಶ್ ಎಕ್ಕೆಗುಂದಿ ಅವರಿಗೆ ಬಾಗಿಲು ಮಾಡಲು ಹೇಳಿದರು.

- Advertisement - 

ಕೆತ್ತನೆಗಾರ ದುರುಗೇಶ ಅವರು ಬೆಂಗಳೂರಿನಿಂದ ಸಿದ್ದರಾಮಯ್ಯ ಅವರ ಭಾವ ಚಿತ್ರ ತರಿಸಿಕೊಂಡು ಕಾನಹೊಸಹಳ್ಳಿಯಲ್ಲಿನ ರವೀಂದ್ರಚಾರಿ ಅವರ ಯಂತ್ರದಲ್ಲಿ ತ್ಯಾಗದ ಕಟ್ಟಿಗೆಯಿಂದ ಬಾಗಿಲನ್ನು ಸಿದ್ದಪಡಿಸಿದರು.

ಇದಕ್ಕಾಗಿ ಮಲ್ಲೇಶಪ್ಪರ ತಿಪ್ಪೇಸ್ವಾಮಿ ಅವರು 28 ಸಾವಿರ ಹಣವನ್ನು ದುರುಗೇಶ ಅವರಿಗೆ ನೀಡಿದ್ದರು. ಇದು ಸವಾಲಿನ ಕೆಲಸವಾಗಿದ್ದರಿಂದ ಬಿಡಬಾರದು ಎನ್ನುವ ಕಾರಣಕ್ಕೆ ನನ್ನ ಕೈಯಿಂದ ಹೆಚ್ಚಿನ ಹಣವನ್ನು ಖರ್ಚು ಮಾಡಿ ಬಾಗಿಲು ಸಿದ್ದಪಡಿಸಿದ್ದೇನೆ ಎನ್ನುತ್ತಾರೆ ಎಚ್.ಎನ್. ದುರುಗೇಶ್ ಎಕ್ಕೆಗುಂದಿ.

- Advertisement - 

ಸಿದ್ದರಾಮಯ್ಯ ಅವರ ಅಭಿಮಾನದಿಂದ ಹಳೇ ಬಾಗಿಲನ್ನು ತೆಗೆದು ಹಾಕಿ ಅವರ ಭಾವಚಿತ್ರವಿರುವ ಹೊಸ ಬಾಗಿಲು ಮಾಡಿಸಿ ಊರಲ್ಲಿ ಹಬ್ಬವಿರುವ ಕಾರಣಕ್ಕೆ ಸೋಮವಾರ ಅಳವಡಿಸಿ ಪೂಜೆ ಸಲ್ಲಿಸಿದ್ದೇವೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.

 

 

 

 

 

 

Share This Article
error: Content is protected !!
";