ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂದು ನಾಟಕವಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮುಖವಾಡ ನಿನ್ನೆ ಇಡಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಿಂದ ಸಂಪೂರ್ಣವಾಗಿ ಕಳಚಿ ಬಿದ್ದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಧರ್ಮಪತ್ನಿ ಅವರಿಗೆ ಅಕ್ರಮವಾಗಿ ಹಂಚಿಯಾಗಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳಲ್ಲಿ ಸಿದ್ದರಾಮಯ್ಯನವರ ರಾಜಕೀಯ ಪ್ರಭಾವ ಬಳಕೆಯಾಗಿರುವುದು ಇಡಿ ಹೇಳಿಕೆಯಲ್ಲಿ ಸುಸ್ಪಷ್ಟವಾಗಿದೆ.
ಅಷ್ಟೇ ಅಲ್ಲದೆ ಸಿದ್ದರಾಮಯ್ಯನವರ ಧರ್ಮ ಪತ್ನಿ ಅವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆಯಾದ ಸಂದರ್ಭದಲ್ಲಿ ಮೂಡಾ ಆಯುಕ್ತರಾಗಿದ್ದ ನಟೇಶ್ ಮತ್ತಿತರ ಅಧಿಕಾರಿಗಳು ಇನ್ನೂ ಅನೇಕ ಅಕ್ರಮಗಳನ್ನು ಎಸಗಿರುವುದೂ ಬೆಳಕಿಗೆ ಬಂದಿದ್ದು, ಸುಮಾರು 300 ಕೋಟಿ ರೂಪಾಯಿ ಬೆಲೆಬಾಳುವ 142 ಸ್ಥಿರಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕು ಎಂದು ಅಶೋಕ್ ತಾಕೀತು ಮಾಡಿದ್ದಾರೆ.

